Columns News

ಜನ, ಜನಪ್ರತಿನಿಧಿ ನೌಕರಶಾಹಿ ಮತ್ತು ಆಡಳಿತ

Share It

ಲೇಖಕರು: ಎಸ್.ಎಚ್ ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.

ನಾವು ಸರಕಾರದ ಹಲವಾರು ಯೋಜನೆಗಳ ಬಗ್ಗೆ ಹೊಗಳುತ್ತೇವೆ ಮತ್ತು ಕೆಲವು ಯೋಜನೆಗಳ ಬಗ್ಗೆ ಟೀಕಿಸುತ್ತೇವೆ. ಆದರೆ ನಿಜವಾಗಿಯೂ ಉತ್ತಮ ಆಡಳಿತ ರೂವಾರಿಗಳು ಯಾರು ಎನ್ನುವದನ್ನು ಕೂಲಂಕಷವಾಗಿ ಯೋಚಿಸಬೇಕಾಗಿದೆ.

ನಮ್ಮ ವ್ಯವಸ್ಥೆಯಲ್ಲಿ ನಾವು ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ನಾವು ಸಂವಿಧಾನದ ಆಶಯದಂತೆ ಮೂರು ಅಂಗಗಳಲ್ಲಿ ರಚನೆ ಮಾಡುತ್ತೇವೆ. ಇದರಲ್ಲಿ ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳಿಂದ ರಚನೆಯಾಗುವ ಶಾಸಕಾಂಗ, ನೌಕರರ ಮೂಲಕ ರಚನೆಯಾಗುವ ಶಾಶ್ವತ ಕಾರ್ಯಾಂಗ ಮತ್ತು ಮಂತ್ರಿಗಳಿಂದ ರಚನೆಯಾಗುವ ಹಂಗಾಮಿ ಕಾರ್ಯಾಂಗ ಮತ್ತು ನ್ಯಾಯಾಧೀಶರು ಇರುವ ನ್ಯಾಯಾಂಗ.

ಶಾಸನ ರಚನೆ ಮಾಡುವದು ಶಾಸಕಾಂಗದ ಕಾರ್ಯ. ಇದು ಜನ ಕಲ್ಯಾಣಕ್ಕಾಗಿ ಮಾಡಿದ ಶಾಸನಗಳನ್ನು ಜಾರಿ ಮಾಡಿ ಅದರಿಂದ ಸಕಲ ಅಭಿವೃದ್ದಿ ಮಾಡುವದು ನೌಕರಶಾಹಿ ಕಾರ್ಯಾಂಗ. ಇನ್ನು ಸರಕಾರ ನಡೆಸಲು ರಚನೆಯಾಗುವ ಮಂತ್ರಿ ಮಂಡಲ ಎನ್ನುವ ಒಂದು ಹಂಗಾಮಿ ಕಾರ್ಯಾಂಗ.

ಜನರ ಮಧ್ಯ ಮತ್ತು ಜನ ಮತ್ತು ಸರಕಾರದ ಮಧ್ಯ ಇರುವ ವ್ಯಾಜ್ಯ ತೀರ್ಮಾನ ಮತ್ತು ಸರಕಾರದ ಆಡಳಿತಾತ್ಮಕ ಕಾರ್ಯಗಳ ನ್ಯಾಯಿಕ ಪರಿಷ್ಕರಣೆ ಮತ್ತು ಕಾಯಿದೆಗಳ ಸಿಂಧುತ್ವ ವಗೈರೆ ತೀರ್ಮಾನ ಮಾಡುವದು ಇವು ನ್ಯಾಯಾಂಗದ ಕಾರ್ಯ.

ನ್ಯಾಯಾಂಗ ಸ್ವತಂತ್ರವಾಗಿ ಕೆಲಸ ಮಾಡಬೇಕು ಅಂತಾ ಇದನ್ನು ಕಾರ್ಯಾಂಗದ ಹಿಡಿತದಿಂದ ಮುಕ್ತವಾಗಿ ಇರಿಸಿದ್ದಾರೆ.

ಇಲ್ಲಿ ನಾವು ಇಂದು ಯೋಚಿಸಬೇಕಾದದ್ದು ಉತ್ತಮ ಆಡಳಿತದ ರೂವಾರಿಗಳು ಯಾರು ಎನ್ನುವದು. ನಾವು ಸರಕಾರ ಬಹಳ ಒಳ್ಳೆಯ ಕಾರ್ಯ ಮಾಡಿದೆ ಎಂದು ಹಲವು ಬಾರಿ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಆದರೆ ಈ ಸರಕಾರದ ಯೋಜನೆಗಳು ಹೇಗೆ ರೂಪಿತವಾಗುತ್ತವೆ ಎನ್ನುವದನ್ನು ತಿಳಿದುಕೊಳ್ಳುವದು ಅಗತ್ಯ.

ನಾವು ಯಾವಾಗಲೂ ಮೈಸೂರು ಅರಸರ ಆಡಳಿತದ ಬಗ್ಗೆ ಮಾತಾಡುವಾಗ, ರಾಜರ ಆಸ್ಥಾನದಲ್ಲಿ ಇದ್ದಂತಹ ಮಂತ್ರಿ ಮತ್ತು ದಿವಾನರ ಬಗ್ಗೆ ಉಲ್ಲೇಖಿಸುತ್ತೇವೆ. ಆ ಸಮಯದಲ್ಲಿ ದಿವಾನರಾಗಿದ್ದ ದಿವಾನ್ ಪೂರ್ಣಯ್ಯ, ಮಿರ್ಜಾ ಇಸ್ಮಾಯಿಲ್ ಮತ್ತು ಸರ್.ಎಂ ವಿಶ್ವೇಶ್ವರಯ್ಯ ಇವರ ಕಾರ್ಯ ವೈಖರಿ ಬಗ್ಗೆ ಹೊಗಳಿ ಒಂದು ಉತ್ತಮ ಆಡಳಿಗಾರರು ಎಂದು ಹೇಳುತ್ತಾರೆ.

ಹಾಗಾದರೆ ರಾಜರು ಮುಖ್ಯವೋ ಅಥವಾ ದಿವಾನರು ಮುಖ್ಯವೋ ಎನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರ ಇಬ್ಬರೂ ಮುಖ್ಯ. ಯಾಕೆಂದರೆ ಆಡಳಿತ ಎಂದರೆ ಏಕ ಚಕ್ರ ವಾಹನ ಅಲ್ಲ. ಆದಕಾರಣ ಕೇವಲ ರಾಜರು ಇದ್ದರೆ ಆಡಳಿತ ಸುಸೂತ್ರವಾಗಿ ನಡೆಯದು. ರಾಜರ ಜನಕಲ್ಯಾಣ ಕಾರ್ಯಕ್ರಮಗಳು ಕಾರ್ಯಗತವಾಗಬೇಕಾದರೆ ಅದನ್ನು ಜಾರಿಗೊಳಿಸುವ ಒಂದು ನೌಕರಶಾಹಿ ಮುಖ್ಯ. ಅದರ ಮುಖ್ಯಸ್ಥರೇ ಆವಾಗ ದಿವಾನರಾಗಿದ್ದರು.

ಒಬ್ಬ ಚತುರ ದಿವಾನ ಹೇಗೆ ರಾಜ್ಯದ ಅಭಿವೃದ್ಧಿ ಆಡಳಿತ ಅಣಿ ಮಾಡುತ್ತಾರೆ ಎನ್ನುವದನ್ನು ನಾವು ಹಿಂದೆ ದಿವಾನರ ಒಂದು ಆಡಳಿತ ವೈಖರಿಯಿಂದ ತಿಳಿದುಕೊಳ್ಳಬೇಕು.

ದಿವಾನರು ಕೇವಲ ರಾಜ್ಯಾಡಳಿತ ನೋಡಿಕೊಳ್ಳುತ್ತಿರಲಿಲ್ಲ. ಆದರೆ ಅವರು ರಾಜರಿಗೆ ಜನಹಿತ ಕಾರ್ಯಕ್ರಮ ರೂಪಿಸಲು ಸಲಹೆ ಸೂಚನೆ ನೀಡುತ್ತಿದ್ದರು. ವಿಶೇಷವೆಂದರೆ ದಿವಾನರ ಮಾತಿಗೆ ರಾಜರೂ ಸಹಮತ ವ್ಯಕ್ತಪಡಿಸುತ್ತಿದ್ದರು. ಒಳ್ಳೆಯ ಆಡಳಿತಕ್ಕೆ ಉತ್ತಮ ಸಲಹಾಕಾರ ದಿವಾನ ಅಥವಾ ಮಂತ್ರಿ ರಾಜರಿಗೆ ಅಗತ್ಯವಿತ್ತು.

ವಿಶ್ವೇಶ್ವರಯ್ಯ ರಾಜರ ತೀರ್ಮಾನ ಕೂಡಾ ಉಚಿತವಲ್ಲ ಎಂದು ಹೇಳುವ ಧೈರ್ಯಶಾಲಿಯಾಗಿದ್ದರು. ಆದರೆ ಅದನ್ನು ರಾಜರು ತಪ್ಪು ತಿಳಿದುಕೊಳ್ಳುತ್ತಿರಲಿಲ್ಲ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚುತ್ತಿತ್ತು.

ಇಂದು ದಿವಾನರ ಸ್ಥಾನದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ನಾವು ಕಾಣಬಹುದು.

ಒಳ್ಳೆಯ ಸಲಹೆ ಒಪ್ಪದ ರಾಜಕಾರಣಿಗಳು ಮತ್ತು ರಾಜಕಾರಣಿಗಳ ಜೊತೆ ಸೇರಿ ಅಕ್ರಮ ಮಾಡುವ ನೌಕರಶಾಹಿ ಇದರಿಂದ ತಿಳಿದುಕೊಳ್ಳುವದು ಬಹಳವಿದೆ.

ವಿಶ್ವೇಶ್ವರಯ್ಯ ಎಷ್ಟು ಪ್ರಾಮಾಣಿಕರು ಇದ್ದರು ಎಂದರೆ ಅವರು ತಮ್ಮ ಖಾಸಗಿ ಕೆಲಸಕ್ಕೆ ಸರಕಾರದ ಯಾವದೇ ಸೌಲಭ್ಯ ಬಳಸುತ್ತಿರಲಿಲ್ಲ. ಅವರು ಒಂದು ಬಾರಿ ಅಧಿಕೃತ ಕೆಲಸಕ್ಕೆ ಬೇರೆ ಊರಿಗೆ ಹೋದಾಗ ಅಲ್ಲಿಯ ಸರಕಾರಿ ಬಂಗಲೆಯಲ್ಲಿ ಒಂದು ರಾತ್ರಿ ಉಳಿದುಕೊಂಡಿದ್ದರು. ಆಗ ಅವರು ಸರಕಾರಿ ಕೆಲಸಕ್ಕೆ ಸರಕಾರದ ಮೇಣ ಬತ್ತಿ ಮತ್ತು ತಮ್ಮ ಸ್ವಂತ ಕೆಲಸಕ್ಕೆ ತಮ್ಮ ಸ್ವಂತ ಹಣದ ಮೇಣ ಬತ್ತಿ ಬಳಸಿದ್ದರು.

ಮುಖ್ಯ ಕಾರ್ಯದರ್ಶಿ ಎಂದರೆ ಅವರು ಕಾರ್ಯಾಂಗದ ಒಬ್ಬ ಉನ್ನತ ಅಧಿಕಾರಿ ಅವರ ನಿಯಂತ್ರಣದಲ್ಲಿ ಮತ್ತು ಮಾರ್ಗದರ್ಶನದಲ್ಲಿ ಅಖಿಲ ಭಾರತ ಸೇವೆ ಮತ್ತು ರಾಜ್ಯಸೇವೆ ಆಡಳಿತಶಾಹಿ ಕಾರ್ಯನಿರ್ವಹಿಸುತ್ತದೆ. ಇವರೆಲ್ಲರೂ ಸರಕಾರಕ್ಕೆ ಯೋಜನೆ ರೂಪಿಸಲು ಸಹಾಯ ಮಾಡುತ್ತಾರೆ. ಆದರೆ ಈಗ ರಾಜಕೀಯ ನಿಯಂತ್ರಣ ಬಂದ ಮೇಲೆ ನೌಕರಶಾಹಿ ತಮ್ಮ ಕರ್ತವ್ಯ ನಿಷ್ಠೆಯಿಂದ ನಿರ್ವಹಿಸುವಲ್ಲಿ ಅಸಮರ್ಥರಾಗಿದ್ದಾರೆ.

ಪ್ರಾಮಾಣಿಕರು ಬೇಡವಾಗಿದ್ದಾರೆ. ಅಪ್ರಾಮಾಣಿಕರು ರಾಜಕಾರಣಿಗಳ ಜೊತೆ ಸೇರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದರ ಪರಿಣಾಮ ಇಡೀ ಆಡಳಿತ ವ್ಯವಸ್ಥೆ ಭ್ರಷ್ಟಮಯವಾಗಿದೆ.

ಕೇವಲ ರಾಜ ಉತ್ತಮನಾಗಿದ್ದರೆ ಸಾಲದು ಆದರೆ ಅವರಿಗೆ ಸಹಕಾರ ಮತ್ತು ಸಲಹೆ ನೀಡುವ ನೌಕರಶಾಹಿ ಮುಖ್ಯ. ಇಂದು ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಭ್ರಷ್ಟ ರಾಜಕಾರಣಿ ಮತ್ತು ನೌಕರರ ಆಡಳಿತದಲ್ಲಿ ಭ್ರಷ್ಟಾಚಾರ ಎದುರಿಸದೇ ಅದಕ್ಕೆ ಹೊಂದಿಕೊಂಡ ಪ್ರಜೆಗಳು. ಇದು ಇಂದಿನ ನಮ್ಮ ದೇಶದ ಅಸಲು ಸ್ಥಿತಿ.

ಕೆಲವು ಅಪರಾಧಗಳನ್ನ ಸಂಘಟಿತ ಅಪರಾಧ ಕಾಯಿದೆ ಅಡಿಯಲ್ಲಿ ಗಂಭೀರವಾಗಿ ತನಿಖೆ ಮಾಡುತ್ತಾರೆ. ಆದರೆ ಹಳ್ಳಿಯಿಂದ ದಿಲ್ಲಿವರೆಗೆ, ಅತ್ಯಂತ ಸಂಘಟಿತ ರೀತಿಯಲ್ಲಿ ನಡೆಯುತ್ತಿರುವ ಅಪರಾಧ ಎಂದರೆ, ಅದು ಭ್ರಷ್ಟಾಚಾರ. ಎಲ್ಲರಿಗೂ ಕಣ್ಣಿಗೆ ರಾಚುವಂತೆ ಕಾಣುವ ಈ ಸಂಘಟಿತ ಅಪರಾಧ ಭ್ರಷ್ಟಾಚಾರ ಮಾತ್ರ, ಅಪರಾಧವೇ ಅಲ್ಲ ಎನ್ನುವಂತೆ ನೋಡಿಯೂ ನೋಡದಂತೆ ಜನ ಇರುವದು ಇಂದಿನ ಭ್ರಷ್ಟಾಚಾರ ಪರಾಕಾಷ್ಠೆ ತಲುಪಲು ಕಾರಣ.

ಅಂಧೇರಿ ನಗರಿ ಚೌಪಟ್ ರಾಜ ಎನ್ನುವ ಸ್ಥಿತಿಗೆ ಅನ್ಯಾಯ ಪ್ರತಿಭಟಿಸದ ನಾಗರಿಕರೇ ಕಾರಣ. ಕೆಟ್ಟ ಆಡಳಿತದಿಂದ ಒಳ್ಳೆಯದು ಆಗಲು ಸಾಧ್ಯವಿಲ್ಲ.

ಕವಿ ಅಡಿಗರು ಹೇಳದಂತೆ ನಾವು ಇಂದು ಕಟ್ಟಬೇಕಾಗಿದೆ ಹೊಸ ನಾಡನ್ನ ರಸದ ಬೀಡನ್ನ. ಜನ ಜಾಗೃತಿ ಮುಂದೆ ಇಂಥ ಸಮಸ್ಯೆಯೂ ನಿಲ್ಲದು.


Share It

You cannot copy content of this page