News

ಇತಿಹಾಸ ಸೃಷ್ಟಿಸಿದ ಲೋಕ ಅದಾಲತ್: ಒಂದೇ ದಿನ 14.77 ಲಕ್ಷ ಪ್ರಕರಣ ಇತ್ಯರ್ಥ

Share It

ಇದೇ ನವೆಂಬರ್ 12 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 14.77 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇತಿಹಾಸ ಸೃಷ್ಟಿಸಿದೆ.

ಈ ಕುರಿತಂತೆ ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಮಾಧ್ಯಮಗಳಿಗೆ ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಮಾಹಿತಿ ನೀಡಿದರು.

ಅಲ್ಲದೇ ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಹಕಾರ ನೀಡಿದ ನ್ಯಾಯಾಂಗ ಅಧಿಕಾರಿಗಳು, ವಕೀಲರು, ಕಕ್ಷೀದಾರರು ವಿವಿಧ ಸಂಸ್ಥೆ ಹಾಗೂ ಇಲಾಖೆಗಳ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.

ದಾಖಲೆ ಸಂಖ್ಯೆಯಲ್ಲಿ ಕೇಸ್ ಇತ್ಯರ್ಥ: ಕೆಎಸ್ಎಲ್ಎಸ್ಎ ಆಯೋಜಿಸುತ್ತಿರುವ ಲೋಕ ಅದಾಲತ್ ನಲ್ಲಿ ಇದೇ ಮೊದಲ ಬಾರಿಗೆ 14.77 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅದಕ್ಕಾಗಿ ಹೈಕೋರ್ಟ್ ನ 8 ಪೀಠಗಳು, ಜಿಲ್ಲಾ ನ್ಯಾಯಾಲಯಗಳಲ್ಲಿ 1013 ಪೀಠಗಳು ಕಾರ್ಯ ನಿರ್ವಹಿಸಿದ್ದವು.

ಈ ಬಾರಿಯ ಲೋಕ ಅದಾಲತ್ ನಲ್ಲಿ 13,00,784 ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 1,76,501 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಜತೆಗೆ 1,282 ಕೋಟಿ ರೂ. ಪರಿಹಾರವನ್ನು ಕೊಡಿಸಲಾಗಿದೆ.

ಟ್ರಾಫಿಕ್ ಕೇಸ್ ಗಳಲ್ಲಿ 23 ಕೋಟಿ ದಂಡ ಸಂಗ್ರಹ: ಪೊಲೀಸರ ಕೋರಿಕೆ ಮೇರೆಗೆ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ 4.16 ಲಕ್ಷ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ಪರಿಗಣಿಸಿ ವಿಲೇವಾರಿ ಮಾಡಲಾಗಿದೆ. ಈ ಮೂಲಕ ಸರ್ಕಾರಕ್ಕೆ 23.89 ಕೋಟಿ ರೂ ದಂಡ ಸಂಗ್ರಹಿಸಿಕೊಡಲಾಗಿದೆ.

ಅಪಘಾತ ಕೇಸ್ ಗಳಲ್ಲಿ 300 ಕೋಟಿ ಪರಿಹಾರ: ಲೋಕ ಅದಾಲತ್ ನಲ್ಲಿ 3,384 ಮೋಟಾರು ಅಪಘಾತ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಸಂತ್ರಸ್ತರಿಗೆ 324.37 ಲಕ್ಷ ರೂ.ಗಳನ್ನು ಪರಿಹಾರವಾಗಿ ಕೊಡಿಸಲಾಗಿದೆ.

ಚೆಕ್ ಬೌನ್ಸ್ ಕೇಸ್ ಗಳಲ್ಲಿ 328 ಕೋಟಿ ಪರಿಹಾರ: ನೆಗೋಷಿಯಬಲ್ ಇನ್ಸ್ಟುಮೆಂಟ್ ಆ್ಯಕ್ಟ್ ಕಾಯ್ದೆ ಅಡಿ ದಾಖಲಾಗಿದ್ದ 10,994 ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ರಾಜಿ ಮೂಲಕ ಇತ್ಯರ್ಥಪಡಿಸಲಾಗಿದ್ದು, 328.94 ಕೋಟಿ ರೂ.ಗಳನ್ನು ಪರಿಹಾರವಾಗಿ ಕೊಡಿಸಲಾಗಿದೆ. ಬೆಂಗಳೂರಿನ ಕೋರ್ಟ್ ನಲ್ಲಿ ಬಾಕಿ ಇದ್ದ ಒಂದೇ ಪ್ರಕರಣದಲ್ಲಿ 32 ಕೋಟಿ ಪರಿಹಾರ ಕೊಡಿಸಿರುವುದು ಕೂಡ ಲೋಕ ಅದಾಲತ್ ನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ದಂಪತಿಗಳನ್ನು ಒಗ್ಗೂಡಿಸಿದ ಅದಾಲತ್: ಪ್ರತಿ ಬಾರಿಯಂತೆ ಈ ಬಾರಿಯೂ ದಾಂಪತ್ಯ ಕಲಹಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸುವಲ್ಲಿ ಲೋಕ ಅದಾಲತ್ ಸಾಕಷ್ಟು ಯಶಸ್ಸು ಸಾಧಿಸಿದೆ. ಅದರಂತೆ ಈ ಬಾರಿ 1460 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 178 ದಂಪತಿಗಳು ತಮ್ಮ ನಡುವಿನ ವಿರಸ ಮರೆತು ಒಂದಾಗಿದ್ದಾರೆ. ವಿಚ್ಚೇದನ ಕೋರಿದ್ದ ಬೆಂಗಳೂರಿನ 32, ಮೈಸೂರಿನ 29, ಬೆಳಗಾವಿಯ 18, ಧಾರವಾಡದ 17 ದಂಪತಿಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ದಂಪತಿಗಳು ತಮ್ಮ ನಡುವಿನ ಕಲಹ ಕೈಬಿಟ್ಟು ಒಂದಾಗಿದ್ದಾರೆ.

ಇತ್ಯರ್ಥಗೊಂಡ ಇತರೆ ಪ್ರಕರಣಗಳ ವಿವರ: ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ ಖಾತೆ ಬದಲಾವಣೆ, ಗುರುತಿನ ಚೀಟಿ ವಿತರಣೆ, ಪಿಂಚಣಿಗೆ ಸಂಬಂಧಿಸಿದ 2.65 ಲಕ್ಷ ಪ್ರಕರಣಗಳನ್ನು ವ್ಯಾಜ್ಯ ಪೂರ್ವ ಪ್ರಕರಣಗಳಾಗಿ ಪರಿಗಣಿಸಿ ಇತ್ಯರ್ಥಪಡಿಸಲಾಗಿದೆ.

ವಿಭಾಗ ದಾವೆಗೆ ಸಂಬಂಧಿಸಿದ 2,887 ಪ್ರಕರಣಗಳು, ರೇರಾದಲ್ಲಿದ್ದ 175 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹಾಗೆಯೇ, ಬ್ಯಾಂಕ್ ವಸೂಲಾತಿಗೆ ಸಂಬಂಧಿಸಿದ 9,383 ಪ್ರಕರಣಗಳನ್ನು ಇತ್ಯರ್ಥಪಡಿಸಿ 63.52 ಕೋಟಿ ರೂ. ವಸೂಲಿ ಮಾಡಿಕೊಡಲಾಗಿದೆ. ಅಂತೆಯೇ ವಿದ್ಯುತ್ ಬಿಲ್ ವಸೂಲಾತಿಗೆ ಸಂಬಂಧಿಸಿದಂತೆ 1.28 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ 18 ಲಕ್ಷ ಹಾಗೂ ನೀರಿನ ಬಿಲ್ ವಸೂಲಿಗೆ ಸಂಬಂಧಿಸಿದ 2.88 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ 27.15 ಕೋಟಿ ರೂ. ವಸೂಲಿ ಮಾಡಿಕೊಡಲಾಗಿದೆ.

ಇನ್ನು ಗ್ರಾಹಕ ವ್ಯಾಜ್ಯಗಳಿಗೆ ಸಂಬಂಧಿಸಿದ 202 ಪ್ರಕರಣಗಳನ್ನು ಇತ್ಯರ್ಥಪಡಿಸಿ 5.94 ಕೋಟಿ ಪರಿಹಾರ ಕೊಡಿಸಲಾಗಿದೆ. ಅಂತೆಯೇ, ಕಮರ್ಷಿಯಲ್ ಕೇಸ್ ಗಳಿಗೆ ಸಂಬಂಧಿಸಿದಂತೆ 39 ಪ್ರಕರಣಗಳನ್ನು ಇತ್ಯರ್ಥಪಡಿಸಿ 1.44 ಕೋಟಿ ಪರಿಹಾರ ಕೊಡಿಸಲಾಗಿದೆ.


Share It

You cannot copy content of this page