ಬೆಂಗಳೂರು; ನ್ಯಾಯಾಲಯದಲ್ಲಿ ಅಥವಾ ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದ ಪ್ರಕರಣವನ್ನು ನ್ಯಾಯಾಲಯದಲ್ಲಿ ಮತ್ತೆ ಮರುವಿಚಾರಣೆಗೆ ಕೋರಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ರಾಜಿ ಮೂಲಕ ಇತ್ಯರ್ಥಪಡಿಸಿದ ಚೆಕ್ ಬೌನ್ಸ್ ಪ್ರಕರಣವನ್ನು ಮರು ವಿಚಾರಣೆ ನಡೆಸಲು ಕೋರಿ ಸಲ್ಲಿಸಿದ್ದ ಮೆಮೋ ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಕ್ರಮ ಪ್ರಶ್ನಿಸಿ ಶೆಲ್ಲಿ ಎಂ ಪೀಟರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ಆದೇಶದಲ್ಲಿ, ಕೋರ್ಟ್ ಅಥವಾ ಲೋಕ ಅದಾಲತ್ ನಲ್ಲಿ ರಾಜಿ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡರೆ ಕೇಸ್ ಮುಕ್ತಾಯವಾದಂತೆ ಆಗುತ್ತದೆ. ಸಿಆರ್ಪಿಸಿ ಸೆಕ್ಷನ್ 362ರ ಪ್ರಕಾರ ನ್ಯಾಯಾಲಯ ಒಮ್ಮೆ ಆದೇಶ ಪ್ರಕಟಿಸಿದ ನಂತರ ಅದನ್ನು ಬದಲಾಯಿಸಲು ಅಥವಾ ಹಿಂಪಡೆಯಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣವನ್ನು ಪುನಃ ಆರಂಭಿಸಲು ಸಾಧ್ಯವಿಲ್ಲ. ಆದರೆ, ರಾಜಿ ಒಪ್ಪಂದದಂತೆ ಹಣ ಪಾವತಿಸದಿದ್ದಾಗ, ಹಣ ವಸೂಲಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಅಲ್ಲದೇ, ಮೆಮೋ ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ರದ್ದುಪಡಿಸಿರುವ ಪೀಠ, ಅರ್ಜಿದಾರರ ಮೆಮೋವನ್ನು ಕ್ರಿಮಿನಲ್ ಮಿಸಲೇನಿಯಸ್ ಅರ್ಜಿಯಾಗಿ ಪರಿಗಣಿಸಬೇಕು. ರಾಜಿ ಒಪ್ಪಂದದಂತೆ ಹಣ ಪಾವತಿಸಲು ವಿಫಲವಾಗಿರುವ ಪ್ರತಿವಾದಿ ಸಂಸ್ಥೆಗೆ ವಾರಂಟ್ ಜಾರಿ ಮಾಡಿ, ಹಣ ವಸೂಲಿ ಪ್ರಕ್ರಿಯೆ ನಡೆಸಬೇಕು ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಬನ್ಯಾನ್ ಪ್ರಾಜೆಕ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಅರ್ಜಿದಾರ ಶೆಲ್ಲಿ ಪೀಟರ್ ನಡುವಿನ ಹಣಕಾಸು ವ್ಯಾಜ್ಯವನ್ನು ಪಕ್ಷಗಾರರ ಇಚ್ಛೆ ಮೇರೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಜಿ ಮೂಲಕ ಇತ್ಯರ್ಥಪಡಿಸಿತ್ತು. ಆದರೆ, ಬನ್ಯಾನ್ ಪ್ರಾಜೆಕ್ಟ್ ಸಂಸ್ಥೆ ನೀಡಿದ್ದ ಚೆಕ್ ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಶೆಲ್ಲಿ ಪ್ರಕರಣದ ವಿಚಾರಣೆಯನ್ನು ಪುನಃ ಆರಂಭಿಸುವಂತೆ ಕೋರಿ ಮೆಮೋ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಮೋವನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಶೆಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
(CRLP 3157/2020)