ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಹಿರಿಯ ನಾಗರಿಕರನ್ನು ಅಲ್ಲಿಯೇ ಬಿಟ್ಟು ಬಂದಿದ್ದ ಕೆಎಸ್‌ಆರ್‌ಟಿಸಿಗೆ ಬೆಂಗಳೂರಿನ ಗ್ರಾಹಕ ಕೋರ್ಟ್ ದಂಡ ವಿಧಿಸಿದೆ.
ಅಲ್ಲದೇ, ತೊಂದರೆಗೊಳಗಾದ ಪ್ರಯಾಣಿಕರಿಗೆ ಟಿಕೆಟ್ ಖರ್ಚಿನ ಜತೆ 1 ಸಾವಿರ ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ.
ಪ್ರಕರಣವೇನು: ಬೆಂಗಳೂರಿನ ಬನಶಂಕರಿ 3ನೇ ಹಂತದ ನಿವಾಸಿ ಎಸ್. ಸಂಗಮೇಶ್ವರನ್ ತಮಿಳುನಾಡಿನ ತಿರುವಣ್ಣಾಮಲೈಗೆ ಹೋಗಿ ಬರಲು ಆನ್‌ಲೈನ್ ಮೂಲಕ ಕೆಎಸ್‌ಆರ್‌ಟಿಸಿ ಐರಾವತ್ ಕ್ಲಬ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದರು. 2019ರ ಅಕ್ಟೋಬರ್ 12ರಂದು ತಿರುವಣ್ಣಾಮಲೈಗೆ ತೆರಳಿ, ಮರು ದಿನ ನಗರಕ್ಕೆ ವಾಪಸ್ಸಾಗಲು ಮಧ್ಯಾಹ್ನದ ಹೊತ್ತಿಗೆ ನಿಗದಿತ ಬಸ್ ನಿಲ್ದಾಣಕ್ಕೆ ಹಿಂತಿರುಗಿದ್ದರು.
ಬಸ್ ಗೆ ಕಾಯುತ್ತಾ ಒಂದು ಗಂಟೆ ಕೂತರೂ ಬಸ್ ಕಾಣಲಿಲ್ಲ. ಹೀಗಾಗಿ, ಟಿಕೆಟ್ ಬುಕಿಂಗ್ ವೇಳೆ ಎಸ್ಎಂಎಸ್ ಮೂಲಕ ಕಳುಹಿಸಿದ್ದ ಬಸ್ ಕಂಡಕ್ಟರ್ ನಂಬರಿಗೆ ಕರೆ ಮಾಡಿದರು. ಈ ವೇಳೆ ಕಂಡಕ್ಟರ್ ಬಸ್ ನಿಲ್ದಾಣಕ್ಕೆ ಬರದೇ ಬೆಂಗಳೂರಿನತ್ತ ಹೊರಟಿದ್ದಾಗಿ ತಿಳಿಸಿದರು.
ತಮ್ಮನ್ನು ವಾಪಸ್ಸು ಕರೆತರದ ಬಸ್ ನಿರ್ವಾಹಕರ ಕ್ರಮಕ್ಕೆ ಬೇಸರಗೊಂಡ ಸಂಗಮೇಶ್ವರನ್ ಅಂತಿಮವಾಗಿ ಮತ್ತೊಂದು ಬಸ್ ಹಿಡಿದು ತಿರುವಣ್ಣಾಮಲೈನಿಂದ ಹೊಸೂರಿಗೆ ಬಂದಿಳಿದು, ನಂತರ ಅಲ್ಲಿಂದ ಮತ್ತೊಂದು ಬಸ್ಸಿ ಹತ್ತಿ ಬೆಂಗಳೂರು ತಲುಪಿಕೊಂಡಿದ್ದರು.
ಬಳಿಕ ಕೆಎಸ್‌ಆರ್‌ಟಿಸಿ ವಿರುದ್ಧ ನಗರದ 2ನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ, ಖುದ್ದಾಗಿ ವಾದ ಮಂಡಿಸಿ, ತಮಗಾದ ಸಂಕಷ್ಟ ವಿವರಿಸಿದ್ದರು.
ದೂರುದಾರರ ವಾದ ಅಲ್ಲಗಳೆದಿದ್ದ ಕೆಎಸ್‌ಆರ್‌ಟಿಸಿ ಪರ ವಕೀಲರು, ಘಟನೆ ನಡೆದ ಸ್ಥಳ ತಿರುವಣ್ಣಾಮಲೈ ಆಗಿರುವುದರಿಂದ ವಿಚಾರಣೆ ವ್ಯಾಪ್ತಿ ಈ ನ್ಯಾಯಾಲಯಕ್ಕೆ ಬರುವುದಿಲ್ಲ. ಆದ್ದರಿಂದ ಪ್ರಕರಣವನ್ನು ವಜಾಗೊಳಿಸಬೇಕು ಎಂದು ಕೋರಿದ್ದರು. ಅಲ್ಲದೇ, ಹುಣ್ಣಿಮೆ ಸಮಯದಲ್ಲಿ ಜನಸಂದಣಿ ನಿಯಂತ್ರಿಸಲು ತಮಿಳುನಾಡು ಪೊಲೀಸರು ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಹೊರಕ್ಕೆ ಸ್ಥಳಾಂತರಿಸಿದ್ದರು.
ಈ ಕುರಿತಂತೆ ಬಸ್ ಕಂಡಕ್ಟರ್ ದೂರುದಾರರಿಗೂ ಎಸ್‌ಎಂಎಸ್ ಕಳುಹಿಸಿದ್ದರು. ಇತರೆ 23 ಪ್ರಯಾಣಿಕರು ಬಸ್ ಹತ್ತಿದರೂ, ದೂರುದಾರುರು ಬಂದಿಲ್ಲ. ಹೀಗಾಗಿ ದೂರುದಾರರದ್ದೇ ತಪ್ಪು ಎಂದು ವಾದಿಸಿದ್ದರು.
ವಾದ ಪ್ರತಿವಾದ ಆಲಿಸಿದ ಗ್ರಾಹಕ ನ್ಯಾಯಾಲಯ, ಕೆಎಸ್‌ಆರ್‌ಟಿಸಿ ತನ್ನ ವಾದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜನರಲ್ ಮ್ಯಾನೇಜರ್ (ಟ್ರಾಫಿಕ್) ಅವರು ಸಂಗಮೇಶ್ವರನ್ ಅವರಿಗೆ ಟಿಕೆಟ್ ಬುಕ್ಕಿಂಗಿಗೆ ಪಾವತಿಸಿದ್ದ 497 ರೂಪಾಯಿ, ಪರ್ಯಾಯ ಬಸ್ ನಲ್ಲಿ ಪ್ರಯಾಣಿಸಲು ಖರ್ಚು ಮಾಡಿದ 200 (131+69) ರೂಪಾಯಿ ಮರುಪಾವತಿಸುವಂತೆ ಆದೇಶಿಸಿದೆ.
ಅಲ್ಲದೇ, ಅನ್ಯ ಸ್ಥಳಕ್ಕೆ ತೆರಳಿದ್ದ ಹಿರಿಯ ನಾಗರಿಕರು ಬೆಂಗಳೂರಿಗೆ ವಾಪಸ್ಸಾಗಲು ತೊಂದರೆ ಎದುರಿಸುವಂತೆ ಮಾಡಿದ್ದಕ್ಕೆ 1 ಸಾವಿರ ರೂಪಾಯಿ ಪರಿಹಾರವನ್ನು ಪಾವತಿಸುವಂತೆ ಆದೇಶಿಸಿದೆ.