ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಸಮ್ಮತಿ ನೀಡಿ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಈಗಿನ ಕಾಂಗ್ರೆಸ್ ಸರ್ಕಾರ ಹಿಂಪಡೆದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ನ್ಯಾ.ಉಮೇಶ್ ಎಂ. ಅಡಿಗ ಅವರಿದ್ದ ಪೀಠ, ತೀರ್ಪು ಕಾಯ್ದಿರಿಸಿದೆ.
ಅರ್ಜಿ ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಪಿ.ಪ್ರಸನ್ನ ಕುಮಾರ್, ರಾಜ್ಯ ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದರೂ ಸಿಬಿಐ ಎಫ್‌ಐಆರ್ ಬಾಕಿ ಉಳಿಯಲಿದೆ. ಇದು ಪ್ರಮುಖ ವಿಚಾರವಾಗಿದೆ. ಇನ್ನು ಸಿಬಿಐ ದಾಖಲಿಸಿರುವ ಎಫ್‌ಐಆರ್ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈ ಪ್ರಕರಣಕ್ಕೆ ಸಂವಿಧಾನದ 131ನೇ ವಿಧಿ ಅನ್ವಯಿಸುವುದಿಲ್ಲ. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಈಗ ಸರ್ಕಾರ ಒಪ್ಪಿಗೆ ಹಿಂಪಡೆದಿದೆ. ಇನ್ನು ಎಫ್‌ಐಆರ್ ಏನಾಗಲಿದೆ ಎಂಬ ಪ್ರಶ್ನೆ ಹೈಕೋರ್ಟ್ ಮುಂದಿದೆ. ಅಗತ್ಯವಾದ ಎಲ್ಲರೂ ನ್ಯಾಯಾಲಯದ ಮುಂದೆ ಇದ್ದಾರೆ. ಇಲ್ಲಿ ಔಪಚಾರಿಕ ಪಕ್ಷಕಾರರು ಸಹ ಇಲ್ಲ. ಹೀಗಾಗಿ ಸಂವಿಧಾನದ 131ನೇ ವಿಧಿ ಅನ್ವಯಿಸಲ್ಲ ಎಂದು ತಿಳಿಸಿದರು.
ಅರ್ಜಿದಾರ ಯತ್ನಾಳ್ ಪರ ವಕೀಲ ವೆಂಕಟೇಶ ದಳವಾಯಿ ವಾದ ಮಂಡಿಸಿ, ಆರ್ಟಿಕಲ್ 131 ರಾಜ್ಯಕ್ಕೆ ಅನ್ವಯ ಆಗುತ್ತದೆ, ಒಬ್ಬ ವ್ಯಕ್ತಿಗೆ ಅಲ್ಲ. ಇಲ್ಲಿ ರಾಜ್ಯ ಸರ್ಕಾರ ಪ್ರಕರಣ ವಾಪಸ್ ಪಡೆದಿರುವುದು ಕಾನೂನು ಬಾಹಿರ. ಸರ್ಕಾರ ಇದನ್ನು ಲೋಕಾಯುಕ್ತಕ್ಕೆ ನೀಡಿದೆ. ಮತ್ತೊಂದೆಡೆ ಸಿಬಿಐ ಎಫ್ಐಆರ್ ಸಹ ಇನ್ನೂ ಹಾಗೇ ಇದೆ. ಒಮ್ಮೆ ಸಿಬಿಐ ಎಫ್ಐಆರ್ ರಿಜಿಸ್ಟರ್ ಮಾಡಿದರೆ ಕೇಂದ್ರ ಸರ್ಕಾರಕ್ಕೂ ವಾಪಸ್ ಪಡೆಯಲು ಅಧಿಕಾರ ಇಲ್ಲ. ಕೇವಲ ನ್ಯಾಯಾಲಯಕ್ಕೆ ಮಾತ್ರ ರದ್ದುಪಡಿಸುವ ಅಧಿಕಾರ ಇರುತ್ತದೆ. ಒಮ್ಮೆ ಸಿಬಿಐ ತನಿಖೆ ಆರಂಭವಾದ ಮೇಲೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ. ಸಿಬಿಐ ಎಫ್ಐಆರ್‌ನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿ ಅಪರಾಧದ ತನಿಖೆಯ ವೇಳೆ ಸಿಬಿಐ ಸ್ವತಂತ್ರವಾಗಿರುತ್ತದೆ ಎಂದು ತಿಳಿಸಿದರು.
ಈ ವೇಳೆ ಲೋಕಾಯುಕ್ತರು ದಾಖಲಿಸುವ ಎಫ್‌ಐಆರ್ ಏನಾಗಲಿದೆ ಎಂದು ಯತ್ನಾಳ್ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿತು. ಇದಕ್ಕೆ ವಕೀಲ ದಳವಾಯಿ ಉತ್ತರಿಸಿ, ಲೋಕಾಯುಕ್ತ ಎಫ್‌ಐಆರ್ ಸ್ವತಂತ್ರವಾಗಿ ನಿಲ್ಲುವುದಿಲ್ಲ. ಸರ್ಕಾರ ಸಿಬಿಐಗೆ ನೀಡಿದ ಅನುಮತಿಯನ್ನು ಅಕ್ರಮವಾಗಿ ಹಿಂಪಡೆದಿದೆ. ಇದರಿಂದ ಸಿಬಿಐ ಎಫ್‌ಐಆರ್ ರದ್ದು ಮಾಡಲಾಗಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸಿಬಿಐ ತನಿಖೆ ಮುಂದುವರಿಸಲು ಅವಕಾಶ ನೀಡಬೇಕು, ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಆದೇಶ ರದ್ದುಮಾಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ನಾವು ರಾಜ್ಯ ಸರ್ಕಾರ ಕೇವಲ ಅನುಮತಿಗೆ ಮಾತ್ರ ಸೀಮಿತ. ನಮಗೂ ಎಫ್‌ಐಆರ್ ರದ್ದು ಕೋರಿದ್ದಕ್ಕೂ ಸಂಬಂಧವಿಲ್ಲ. ಇಲ್ಲಿ ವೈಯುಕ್ತಿಕ ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ. ಇಲ್ಲಿ ಸಿಬಿಐ ಹೇಗೆ ಅನುಮತಿ ಪಡೆದಿದೆ? ಅದನ್ನ ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದನ್ನು ಕೋರ್ಟ್‌ಗೆ ತಿಳಿಸದೇ ವಂಚಿಸಲಾಗಿದೆ.
ದೆಹಲಿ ವಿಶೇಷ ಪೊಲೀಸ್ ಕಾಯಿದೆ ಸೆಕ್ಷನ್ 3ರ ಅಡಿಯಲ್ಲಿ ಸಾಮಾನ್ಯ ಒಪ್ಪಿಗೆ ಪಡೆಯಲಾಗಿಲ್ಲ. ರಾಜ್ಯ ಸರ್ಕಾರ ಸಾಮಾನ್ಯ ಒಪ್ಪಿಗೆ ನೀಡಿಲ್ಲ. ಈ ಪ್ರಕರಣದಲ್ಲಿ ವಿಶೇಷ ಒಪ್ಪಿಗೆ ನೀಡಲಾಗಿದೆ ಈ ಹಿಂದಿನ ಸಿಎಂ (ಬಿ.ಎಸ್. ಯಡಿಯೂರಪ್ಪ) ಮೌಖಿಕ ಆದೇಶ ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಇಡಿ ದಾಖಲೆಗಳನ್ನು ಸ್ಥಳೀಯ ಪೊಲೀಸರಿಗೆ ಕಳುಹಿಸಬೇಕಿತ್ತು. ಆದರೆ ಅವರು ಸಿಬಿಐಗೆ ಕಳುಹಿಸಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿರಲಿಲ್ಲ ಎಂದು ಹೇಳಿದರು. ಜತೆಗೆ ಇದನ್ನು ಸ್ಥಳೀಯ ಪೊಲೀಸರು ಮತ್ತು ಲೋಕಾಯುಕ್ತರು ಏಕೆ ತನಿಖೆ ನಡೆಸಬಾರದು? ಸಿಬಿಐ ಏಕೆ ತನಿಖೆ ನಡೆಸಬೇಕು? ಇದರಲ್ಲಿ ಸಂಪೂರ್ಣ ರಾಜಕೀಯ ದುರುದ್ದೇಶ ಅಡಗಿದೆ ಎಂದು ವಾದಿಸಿದರು.
ಡಿ ಕೆ ಶಿವಕುಮಾರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ಸಿಬಿಐಗೆ ಅನುಮತಿ ನೀಡಿರುವುದನ್ನು ಹಿಂಪಡೆದಿರುವುದನ್ನು ಸಿಬಿಐ ಪ್ರಶ್ನಿಸಿದೆ. ಇಲ್ಲಿ ಸಿಬಿಐ ಮತ್ತು ರಾಜ್ಯ ಸರ್ಕಾರ ಪಕ್ಷಕಾರರು. ನಾನು ಖಾಸಗಿ ವ್ಯಕ್ತಿಯಾಗಿದ್ದೇನೆ. ಕೇಂದ್ರ ಸರ್ಕಾರದ ಪರ್ಯಾಯ ರೂಪದಂತೆ ಸಿಬಿಐ ವರ್ತಿಸುತ್ತದೆ. ಸಾಮಾನ್ಯ/ವಿಶೇಷ ಒಪ್ಪಿಗೆ ವಿಚಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದೆ. ನಮ್ಮ ಪ್ರಕರಣದಲ್ಲಿ ಸಾಮಾನ್ಯ ಒಪ್ಪಿಗೆ ನೀಡಲಾಗಿಲ್ಲ, ನಿರ್ದಿಷ್ಟ ಒಪ್ಪಿಗೆ ನೀಡಲಾಗಿದೆ. ಇದು ಕಾನೂನುಬಾಹಿರ. ಈ ಪ್ರಕರಣವನ್ನು ರಾಜ್ಯ ಪೊಲೀಸರು ಅಥವಾ ಲೋಕಾಯುಕ್ತ ಏಕೆ ತನಿಖೆ ನಡೆಸಲಿಲ್ಲ. ಇನ್ನು ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದಿರುವುದಕ್ಕೂ ಸಿಬಿಐ ಎಫ್‌ಐಆರ್ ರದ್ದತಿ ಅರ್ಜಿ ವಜಾ ಮಾಡಿದ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಹಿನ್ನೆಲೆ: 2019ರಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಡಿಕೆ ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಅಂದಿನ ಬಿಜೆಪಿ ಸರ್ಕಾರ ಅನುಮತಿ ನೀಡಿತ್ತು. ಸಿಬಿಐ ತನಿಖೆ ಪ್ರಶ್ನಿಸಿ ಡಿಕೆ ಶಿವಕುಮಾರ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಡಿಕೆ ಶಿವಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಜತೆಗೆ ಸರ್ಕಾರ ಅನುಮತಿ ಹಿಂಪಡೆದಿದ್ದಾರೂ ಹೇಗೆ ಎಂದು ಪ್ರಶ್ನಿಸಿತ್ತು.
ಇದರ ನಡುವೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದು ಆದೇಶಿಸಿತ್ತು. ಸರ್ಕಾರದ ಈ ಆದೇಶ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದಾರೆ. ಜತೆಗೆ, ಸಿಬಿಐ ಕೂಡ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ.