ಲೇಖನ: ಸಂಗಮೇಶ ಎಂ. ಹೆಚ್, ವಕೀಲರು, Ph: 8880722220
ಹಿಂದೂ ವಾರಸಾ ಅಧಿನಿಯಮ 1956- ಸಮಸ್ತ ಹಿಂದೂಗಳಿಗೆ ಅನ್ವಯವಾಗುವಂತೆ ಉತ್ತರಾಧಿಕಾರತ್ವಕ್ಕೆ ಸಂಬಂಧಿಸಿ ಈ ಕಾನೂನನ್ನು ಜಾರಿಗೆ ತರಲಾಗಿದೆ. ಈ ಅಧಿನಿಯಮವು ಮುಸ್ಲಿಂ, ಕ್ರೈಸ್ತ, ಪಾರ್ಸಿ ಮತ್ತು ಯಹೂದಿ ಧರ್ಮಿಯರಲ್ಲದ ಇತರರಿಗೆ ಅಂದರೆ
(i) ವೀರಶೈವ, ಲಿಂಗಾಯತ ಮತ್ತು ಆರ್ಯ ಸಮಾಜ, ಬ್ರಹ್ಮ ಸಮಾಜ ಇವುಗಳ ಅನುಯಾಯಿಗಳನ್ನೊಳಗೊಂಡಂತೆ ಯಾವುದೇ ಸ್ವರೂಪದಲ್ಲಿ ಹಿಂದೂ ಧರ್ಮವನ್ನು ಆಚರಿಸುವವರಿಗೆ; ಹಾಗೂ
(ii) ಬೌದ್ಧ, ಜೈನ ಮತ್ತು ಸಿಖ್ ಧರ್ಮಿಯರಿಗೆಲ್ಲ ಅನ್ವಯಿಸುತ್ತದೆ. ಈ ಅಧಿನಿಯಮ ಜಾರಿಗೆ ಬರುವ ಮೊದಲು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯ ವಿಭಾಗ ಆಗುವ ಮೊದಲೇ ಆ ಕುಟುಂಬದ ಸದಸ್ಯನೊಬ್ಬ ಸತ್ತಾಗ, ಅವನ ಪಾಲಿಗೆ ಬರುವಷ್ಟು ಆಸ್ತಿಯನ್ನು ಸೀಮಿತವಾಗಿ ಹೊಂದುವ ಹಕ್ಕು ಆತನ ವಿಧವೆಗೆ 1937ರ ಹಿಂದೂ ಮಹಿಳಾ ಆಸ್ತಿಯ ಹಕ್ಕಿನ ಶಾಸನದಿಂದ ಮೊದಲ ಬಾರಿಗೆ ಪ್ರಾಪ್ತವಾಯಿತು. ಹೀಗೆ ಸೀಮಿತ ಅಧಿಕಾರದಿಂದ ಪಡೆದ ಆಸ್ತಿಯು ಅವಳ ಮರಣಾ ನಂತರ ಆಕೆಯ ಪತಿಯ ಸಹೋದರಿಗೆ ವಾಪಸ್ಸಾಗುತ್ತಿತ್ತು. ಅದನ್ನು ಮಾರಾಟ ಮಾಡುವ ರೀತಿಯಲ್ಲಿ ವಿಲೇವಾರಿ ಮಾಡುವ ಅಧಿಕಾರವು ಆಕೆಗೆ ಇರಲಿಲ್ಲ.
1956ರ ಹಿಂದೂ ವಾರಸಾ ಅಧಿನಿಯಮ ಜಾರಿಗೆ ಬಂದ ನಂತರ ಹಿಂದೂ ಮಹಿಳೆಯೊಬ್ಬಳು ಕುಟುಂಬದ ಆಸ್ತಿಯಲ್ಲಿ ಕುಟುಂಬದ ಮೃತ ಸದಸ್ಯನ ವಿಧವೆ ಹೆಂಡತಿಯಾಗಿ, ತಾಯಿಯಾಗಿ, ಮಗಳಾಗಿ, ವಿಧವೆ ಸೊಸೆಯಾಗಿ ಅಲ್ಲದೇ ಮೃತ ಹಿಂದೂ ಪುರುಷ ಅಥವಾ ಮಹಿಳೆಯ ಬೇರೆ ಬೇರೆ ರೀತಿಯಲ್ಲಿಯ ಸಂಬಂಧಿಯಾಗಿ ಮೃತನ(ಳ) ಆಸ್ತಿಯಲ್ಲಿ ಪಾಲು ಪಡೆಯುವಂತಾಯಿತಲ್ಲದೇ ಆಕೆಯು ಆ ಆಸ್ತಿಯನ್ನು ಯಾವುದೇ ರೀತಿಯಲ್ಲಿ ಪಡೆದಿರಲಿ, ಎಂದೇ ಪಡೆದಿರಲಿ, ಅದಕ್ಕೆ ಆಕೆ ಸಂಪೂರ್ಣ ಮಾಲೀಕಳಾಗಿ ಅದನ್ನು ತನ್ನ ಇಚ್ಛಾನುಸಾರ ವಿಲೇವಾರಿ ಮಾಡುವ ಹಕ್ಕನ್ನೂ ಪಡೆದಳು.
ಮೃತ ಹಿಂದೂ ಪುರುಷನ ಆಸ್ತಿಯನ್ನು ಯಾರು ಹೇಗೆ ಪಡೆಯುತ್ತಾರೆ? ಹಿಂದೂ ಪುರುಷನು ಮೃತ್ಯು ಪತ್ರ ಬರೆಯದೇ ಮೃತಪಟ್ಟಲ್ಲಿ ಆತನ ಆಸ್ತಿಯನ್ನು
ಎ)ಮೊದಲನೆಯದಾಗಿ : ಹಿಂದೂ ವಾರಸಾ ಕಾಯ್ದೆಯ ಅನುಸೂಚಿಯಲ್ಲಿ ಮೊದಲ ವರ್ಗದ ವಾರಸುದಾರರೆಂದು ಹೇಳಲಾಗಿರುವವರು, ಅಂದರೆ
* ಮೃತನ – ಮಗ, ಮಗಳು, ವಿಧವೆ ಹೆಂಡತಿ, ತಾಯಿ,
* ಮೃತನಿಗಿಂತ ಮೊದಲೇ ಮೃತಪಟ್ಟಿದ್ದ-ಮಗನ ಮತ್ತು ಮಗಳ ಗಂಡು ಮತ್ತು ಹೆಣ್ಣು ಮಕ್ಕಳು ಹಾಗೂ ಮೃತನ ವಿಧವೆ ಸೊಸೆ.
* ತನಗಿಂತ ಮೊದಲೇ ಮೃತಪಟ್ಟಿದ್ದ-ಮೊಮ್ಮಗನ ಅಂದರೆ ಮಗನ ಮಗನ ವಿಧವೆ ಹೆಂಡತಿ ಹಾಗೂ ಆತನ ಮಕ್ಕಳು (ಅಂದರೆ ಗಂಡು ಮತ್ತು ಹೆಣ್ಣು ಮಕ್ಕಳು)
ಹೀಗೆ 12 ವಿಧದ ವಾರಸುದಾರರು ಪಡೆಯುತ್ತಾರೆ. ಇವರಲ್ಲಿ ಎಷ್ಟು ಜನ ಜೀವಂತ ಇರುತ್ತಾರೋ ಅವರೆಲ್ಲ ಆಸ್ತಿಯೆಲ್ಲವನ್ನು ಏಕಕಾಲಕ್ಕೆ ಮತ್ತು ಸಮನಾಗಿ ಪಡೆಯುತ್ತಾರೆ.
ಬಿ) ಎರಡನೆಯದಾಗಿ : ಅನುಸೂಚಿಯಲ್ಲಿ ಪಟ್ಟಿ ಮಾಡಲಾದ ಒಂದನೇ ವರ್ಗದ ವಾರಸುದಾರರು ಯಾರೂ ಇರದಿದ್ದ ಪಕ್ಷದಲ್ಲಿ ಮೃತನ ಆಸ್ತಿಯನ್ನು ಎರಡನೇ ವರ್ಗದ ವಾರಸುದಾರರು ಪಡೆಯುತ್ತಾರೆ.
ಎರಡನೆಯ ವರ್ಗದ ವಾರಸುದಾರರೆಂದರೆ
(1) ಮೃತನ ತಂದೆ
(2) ಮೃತನ – (1) ಮಗನ ಮಗಳ ಮಗ (ಅಂದರೆ ಮೃತನ ಗಂಡು ಮೊಮ್ಮಗಳ ಮಗ; (ii) ಮಗನ ಮಗಳ ಮಗಳು (ಅಂದರೆ ಮೃತನ ಗಂಡು ಮೊಮ್ಮಗಳ ಮಗಳು); (iii) ಸಹೋದರ; ಮತ್ತು (iv) ಸಹೋದರಿ.
(3) ಮೃತನ – (i) ಮಗಳ ಮಗನ ಮಗ (ಅಂದರೆ ಮೃತನ ಹೆಣ್ಣು ಮೊಮ್ಮಗನ ಮಗ);
(ii) ಮಗಳ ಮಗನ ಮಗಳು (ಅಂದರೆ ಮೃತನ ಹೆಣ್ಣು ಮೊಮ್ಮಗಳ ಮಗಳು); (iii) ಮಗಳ ಮಗಳ ಮಗ (ಅಂದರೆ ಮೃತನ ಹೆಣ್ಣು ಮೊಮ್ಮಗಳ ಮಗ); (iv) ಮಗಳ ಮಗಳ ಮಗಳು (ಅಂದರೆ ಮೃತನ ಹೆಣ್ಣು ಮೊಮ್ಮಗಳ ಮಗಳು); (4) ಮೃತನ – (i) ಸಹೋದರನ ಮಗ ; (ii) ಸಹೋದರಿಯ ಮಗ; (iii) ಸಹೋದರನ ಮಗಳು; (iv) ಸಹೋದರಿಯ ಮಗಳು;
(5) ಮೃತನ – (i) ತಂದೆಯ ತಂದೆ; (ii) ತಂದೆಯ ತಾಯಿ;
(6) ಮೃತನ – (i) ತಂದೆಯ ವಿಧವೆ; (ii) ಸಹೋದರನ ವಿಧವೆ; (7) ಮೃತನ – (i) ತಂದೆಯ ಸಹೋದರ; (ii) ತಂದೆಯ ಸಹೋದರಿ; (8) ಮೃತನ – (i) ತಾಯಿಯ ತಂದೆ; (ii) ತಾಯಿಯ ತಾಯಿ;
(9) ಮೃತನ – (1) ತಾಯಿಯ ಸಹೋದರ; (ii) ತಾಯಿಯ ಸಹೋದರಿ;
ಎರಡನೇ ವರ್ಗದ ವಾರಸುದಾರರೆಂದು ಮೇಲೆ ಹೇಳಿದ ರೀತಿಯಲ್ಲಿ 9 ಉಪಪಟ್ಟಿಗಳು ಇರುವುದರಿಂದ 1ನೇ ಉಪ ಪಟ್ಟಿಯಲ್ಲಿ ಇರುವ ವಾರಸುದಾರ (ಮೃತನ ತಂದೆ) ಇದ್ದಾಗ ಇತರೇ 2ರಿಂದ 9ನೇ ಉಪಪಟ್ಟಿಗಳಲ್ಲಿಯ ವಾರಸುದಾರರು ಏನನ್ನೂ ಪಡೆಯುವುದಿಲ್ಲ.
1 ರಿಂದ 8ನೇ ಉಪ ಪಟ್ಟಿಯಲ್ಲಿಯ ವಾರಸುದಾರರು ಯಾರೂ ಇಲ್ಲದಿದ್ದಾಗ ಮಾತ್ರ ಕೊನೆಯದಾಗಿ9ನೇ ಪಟ್ಟಿಯಲ್ಲಿ ಸೇರಿಸಲಾದ ಮೃತನ ತಾಯಿಯ ಸಹೋದರ ಅಂದರೆ ಅತನ ಸೋದರ ಮಾವ ಮತ್ತು ಮೃತನ ತಾಯಿಯ ಸಹೋದರಿ ಅಂದರೆ ಮೃತನ ಚಿಕ್ಕಮ್ಮ ಅಥವಾ ದೊಡ್ಡಮ್ಮ ಮೃತನ ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕುಳ್ಳವರಾಗುತ್ತಾರೆ.
ಸಿ) ಮೂರನೆಯದಾಗಿ:- ಮೃತನ ಮೊದಲನೇ ವರ್ಗದ ಅಥವಾ ಎರಡನೇ ವರ್ಗದ ವಾರಸುದಾರರಲ್ಲಿ ಯಾರೊಬ್ಬರೂ ಜೀವಂತ ಇಲ್ಲದಿದ್ದಲ್ಲಿ ಆತನ ಆಸ್ತಿಯನ್ನು ಆತನ ಗೋತ್ರಜರು ಪಡೆಯುತ್ತಾರೆ
ಡಿ) ನಾಲ್ಕನೆಯದಾಗಿ:- ಮೃತನ ಮೊದಲನೇ ಮತ್ತು ಎರಡನೇ ವರ್ಗದ ವಾರಸುದಾರರು ಹಾಗೂ ಗೋತ್ರಜರು ಯಾರೂ ಇಲ್ಲದಿದ್ದರೆ ಆತನ ಆಸ್ತಿಯನ್ನು ಆತನ ಒಂದೇ ಮೂಲದ ಸ್ವಜಾತಿ ಬಂಧು (ಕಾಗ್ನಟ) ಪಡೆಯುತ್ತಾನೆ.
ಮೃತ ಹಿಂದೂ ಸ್ತ್ರೀಯ ಆಸ್ತಿಯನ್ನು ಯಾರು ಹೇಗೆ ಪಡೆಯುತ್ತಾರೆ? ಆಕೆಯು ಮೃತ್ಯು ಪತ್ರ ಮಾಡದೇ ಮೃತಳಾದಲ್ಲಿ ಆಕೆಯ ಆಸ್ತಿಯು:
(ಎ) ಮೊದಲನೆಯದಾಗಿ, ಆಕೆಯ ಮಗನಿಗೆ, ಮಗಳಿಗೆ (ಮೊದಲೇ ಮೃತಪಟ್ಟಿದ್ದ ಮಗನ ಇಲ್ಲವೇ ಮಗಳ ಮಕ್ಕಳನ್ನೊಳಗೊಂಡು) ಮತ್ತು ಗಂಡನಿಗೆ; (ಬಿ) ಎರಡನೆಯದಾಗಿ, ಆಕೆಯ ಗಂಡನ ಉತ್ತರಾಧಿಕಾರಿಗಳಿಗೆ (ಸಿ) ಮೂರನೆಯದಾಗಿ, ಆಕೆಯ ತಾಯಿ ಮತ್ತು ತಂದೆಗೆ
(ಡಿ) ನಾಲ್ಕನೆಯದಾಗಿ, ಆಕೆಯ ತಂದೆಯ ಉತ್ತರಾಧಿಕಾರಿಗಳಿಗೆ (ಇ) ಐದನೆಯದಾಗಿ, ಆಕೆಯ ತಾಯಿಯ ಉತ್ತರಾಧಿಕಾರಿಗಳಿಗೆ
ಪ್ರಾಪ್ತವಾಗುತ್ತದೆ.
ಮೇಲೆ ಹೇಳಿದ (ಎ) ದಿಂದ (ಇ) ಗಳಡಿಯಲ್ಲಿ ನಮೂದಿಸಿದ ವಾರಸುದಾರರಲ್ಲಿ (ಎ)ದಲ್ಲಿ ನಮೂದಾದ ವಾರಸುದಾರರು ಮೊದಲು ಆಸ್ತಿಯನ್ನು ಪಡೆಯುತ್ತಾರೆ. ಅಂಥವರು ಇಲ್ಲದಿದ್ದರೆ ಮಾತ್ರ (ಬಿ) ಯಲ್ಲಿ ನಮೂದಾದವರು ಪಡೆಯುತ್ತಾರೆ.
ಹೀಗೆಯೇ (ಎ) ದಿಂದ (ಡಿ) ವರೆಗೆ ನಮೂದಾದ ವಾರಸುದಾರರಿಲ್ಲದಿದ್ದಾಗ ಮಾತ್ರ (ಇ) ದಲ್ಲಿ ನಮೂದಾದ ವಾರಸುದಾರರು ಪಡೆಯುತ್ತಾರೆ. (ಕಲಂ 15, 16).
ಒಂದು ವೇಳೆ ಮೃತ ಮಹಿಳೆಗೆ ಮಗ ಇಲ್ಲವೇ ಮಗಳು (ಮೊದಲೇ ಮೃತ ಪಟ್ಟಿದ್ದ ಮಗನ ಇಲ್ಲವೇ ಮಗಳ ಮಗ ಅಥವಾ ಮಗಳನ್ನು ಒಳಗೊಂಡು) ಯಾರೂ ಇಲ್ಲದಿದ್ದರೆ ಮತ್ತು ಆಕೆಯು ತನ್ನ ಆಸ್ತಿಯನ್ನು
(6) ತನ್ನ ತಂದೆಯಿಂದ ಇಲ್ಲವೇ ತಾಯಿಯಿಂದ ವಾರಸಾ ಮೂಲಕ ಪಡೆದಿದ್ದರೆ, ಅದು ಆಕೆಯ ತಂದೆಯ ಉತ್ತರಾಧಿಕಾರಿಗಳಿಗೆ
(ii) ತನ್ನ ಗಂಡನಿಂದ ಇಲ್ಲವೇ ಗಂಡನ ತಂದೆಯಿಂದ ವಾರಸಾ ಮೂಲಕ ಪಡೆದಿದ್ದರೆ, ಅದು ಆಕೆಯ ಗಂಡನ ವಾರಸುದಾರರಿಗೆ
ಪ್ರಾಪ್ತವಾಗುತ್ತದಲ್ಲದೇ ಮೇಲೆ ಹೇಳಿದ ವಾರಸುದಾರರಿಗೆ ನಿರ್ದಿಷ್ಟಪಡಿಸಿದ ಕ್ರಮದಂತೆ ಪ್ರಾಪ್ತವಾಗುವುದಿಲ್ಲ. ಉದಾಹರಣೆಗೆ – –
ಹಿಂದೂ ಸ್ತ್ರೀಯು ತನ್ನ ತಾಯಿ ಅಥವಾ ತಂದೆಯಿಂದ ವಾರಸಾ ಮೂಲಕ ಪಡೆದ ಆಸ್ತಿಯನ್ನು ಹಾಗೂ ತನ್ನ ಸಹೋದರಿ ಹಾಗೂ ತಾಯಿಯನ್ನು ಬಿಟ್ಟು ಮೃತಳಾಗಿದ್ದರೆ, ಆ ಆಸ್ತಿಯು ಅವಳ ತಂದೆಯ ಒಂದನೆಯ ವರ್ಗದ ವಾರಸುದಾರರಾದ ಆಕೆಯ ಸಹೋದರಿ ಮತ್ತು ತಾಯಿಗೆ ಪ್ರಾಪ್ತವಾಗುತ್ತದೆ.
ಮೇಲೆ ಹೇಳಿದ ಉದಾಹರಣೆಯಲ್ಲಿ ಮೃತಳು ತನ್ನ ಗಂಡ ಅಥವಾ ಗಂಡನ ತಂದೆಯಿಂದ ವಾರಸಾ ಮೂಲಕ ಪ್ರಾಪ್ತವಾದ ಆಸ್ತಿಯನ್ನು ಬಿಟ್ಟು ಮೃತಳಾಗಿದ್ದರೆ, ಆ ಆಸ್ತಿಯು ಅವಳ ಗಂಡನ ಒಂದನೆಯ ವರ್ಗದ ವಾರಸುದಾರರಿಗೆ (ಅಂದರೆ ಮೃತಳ ಗಂಡನ ಮಗ, ಮಗಳು, ತಾಯಿ, ಮೊದಲೇ ಮೃತನಾಗಿದ್ದ ಮಗನ ಅಥವಾ ಮಗಳ ಮಗ, ಅಥವಾ ಮಗಳು, ವಿಧವೆ ಸೊಸೆ ಮುಂತಾದವರಿಗೆ ಮಾತ್ರ ಪ್ರಾಪ್ತವಾಗುತ್ತದೆ. ಇಲ್ಲಿ ಮೃತಳ
ಸಹೋದರಿ ಮತ್ತು ತಾಯಿ ಅವಳ ಗಂಡನ ಒಂದನೆಯ ವರ್ಗದ ಅವರಿಗೆ ಆ ಆಸ್ತಿಯಲ್ಲಿ ವಾರಸುದಾರರಾಗಿರುವುದಿಲ್ಲವಾದ್ದರಿಂದ ಯಾವುದೇ ಹಿಸ್ಸೆ (ಪಾಲು) ಪ್ರಾಪ್ತವಾಗುವುದಿಲ್ಲ.
ಮೃತ್ಯುಪತ್ರ ಮಾಡದೇ ಮೃತಪಟ್ಟ ಹಿಂದೂ ಪುರುಷನ ಅಥವಾ ಸ್ತ್ರೀಯ ಉತ್ತರಾಧಿಕಾರತ್ವಕ್ಕೆ ಸಂಬಂಧಿಸಿದ ಮೇಲಿನ ನಿಯಮಗಳನ್ನು ಪರಿಶೀಲಿಸಲು ಹಿಂದೂ ಮಹಿಳೆಯ ಆಸ್ತಿಯ ಹಕ್ಕಿಗೆ ಸಂಬಂಧಿಸಿದಂತೆ ಕಂಡುಬರುವುದೇನೆಂದರೆ, ಈ ಅಧಿನಿಯಮದನ್ವಯ
ಹಿಂದೂ ವಿಧವೆ ಹೆಂಡತಿಯೊಬ್ಬಳು ತನ್ನ ಮೃತ ಪತಿಯ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ತನ್ನ ಮಕ್ಕಳೊಂದಿಗೆ ಸಮನಾದ ಪಾಲನ್ನು ಪಡೆಯುತ್ತಾಳೆ. ಮತ್ತು
• ತಮ್ಮ ಮೃತ ತಂದೆಯ ಆಸ್ತಿಯಲ್ಲಿ ಹಿಂದೂ ಹೆಣ್ಣು ಮಕ್ಕಳು ತಮ್ಮ ತಾಯಿ ಸಹೋದರರೊಂದಿಗೆ ಸಮನಾದ ಪಾಲನ್ನು ಪಡೆಯುತ್ತಾರೆ.
1994ರಲ್ಲಿ ಕರ್ನಾಟಕ ಶಾಸಕಾಂಗವು ಈ ಅಧಿನಿಯಮಕ್ಕೆ ತಂದ ತಿದ್ದುಪಡಿಯಿಂದಾಗಿ ಮಗಳು ಕೂಡಾ ಮಗನಂತೆ ತನ್ನ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಕೊಪಾರ್‌ನರಿ (ದಾಯಾದಿ) ಹಕ್ಕನ್ನು ಪಡೆದುಕೊಂಡಿದ್ದಾಳೆ. ಆದರೆ 1994 ಜುಲೈ 30ಕ್ಕಿಂತ ಮೊದಲು- (i) ಆಕೆಯು ಮದುವೆ ಆಗಿದ್ದಲ್ಲಿ, ಅಥವಾ (ii) ಕುಟುಂಬದ ಆಸ್ತಿಯನ್ನು ಕುಟುಂಬದ ಸದಸ್ಯರೆಲ್ಲಾ ವಿಭಾಗ ಮಾಡಿಕೊಂಡಿದ್ದಲ್ಲಿ, ಆಕೆಗೆ ದಾಯಾದಿತ್ವದ ಈ ಹಕ್ಕು ಪ್ರಾಪ್ತವಾಗುವುದಿಲ್ಲ.
•ತನ್ನ ತಂದೆ ಜೀವಂತವಿರುವವರೆಗೆ ಮಗಳು ಆತನ ಪಿತ್ರಾರ್ಜಿತ ಆಸ್ತಿಯಲ್ಲಿ ವಿಭಾಗ ಕೇಳುವಂತಿಲ್ಲ.
(i) ತಂದೆಯು ತನ್ನ ಪಿತ್ರಾರ್ಜಿತ ಆಸ್ತಿಯಲ್ಲಿ ತನ್ನ ಮಗಳಿಗೆ ಪಾಲು ಕೊಡದೇ ತನ್ನ ಗಂಡು ಮಕ್ಕಳೊಂದಿಗೆ ಆಸ್ತಿಯ ವಿಭಾಗ ಮಾಡಿಕೊಂಡರೆ: ಅಥವಾ (ii) ತಂದೆ ನಿಧನನಾದ ನಂತರ,
ಮಗಳಿಗೆ ತನ್ನ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ವಿಭಾಗ ಕೇಳುವ ಹಕ್ಕು ಪ್ರಾಪ್ತವಾಗುತ್ತದೆ.
ಮೃತ ಹಿಂದೂ ಮಹಿಳೆಯ ಆಸ್ತಿಯಲ್ಲಿ ಆಕೆಯ ಹೆಣ್ಣು ಮಕ್ಕಳು ಗಂಡು
ಮಕ್ಕಳೊಂದಿಗೆ (ಅಂದರೆ ತಮ್ಮ ಸಹೋದರರೊಂದಿಗೆ) ಸಮನಾದ ಪಾಲ ಪಡೆಯುತ್ತಾರೆ.
ಹಿಂದೂ ಮಹಿಳೆ ಒಬ್ಬ ತಾಯಿಯಾಗಿ ತನ್ನ ಮೃತ ಮಗನ ಆಸ್ತಿಯಲ್ಲಿ ಆ
ವಿಧವೆ ಹೆಂಡತಿ ಮತ್ತು ಮಕ್ಕಳೊಂದಿಗೆ ಸಮನಾದ ಪಾಲನ್ನು ಪಡೆಯುತ್ತಾ ಹಿಂದೂ ಮಹಿಳೆ ಒಬ್ಬ ತಾಯಿಯಾಗಿ ತನ್ನ ಮೃತ ಮಗಳ ಆಸ್ತಿಯಲ್ಲಿ ಪಾಲ ಪಡೆಯುತ್ತಾಳೆ. (ತನ್ನ ಮೃತ ಮಗಳ-ಮಗ, ಮಗಳು, ಗಂಡ, ಗಂಡ, ಉತ್ತರಾಧಿಕಾರಿಗಳು ಯಾರೂ ಜೀವಂತ ಇರದಿದ್ದಾಗ ಮಾತ್ರ ಇಂತ ಮಹಿಳೆಯು ತನ್ನ ಮೃತ ಮಗಳ ಆಸ್ತಿಯಲ್ಲಿ ಪಾಲು ಪಡೆಯುತ್ತಾಳೆ.)
ಹಿಂದೂ ವಿಧವೆ ಸೊಸೆ ತನ್ನ ಮೃತ ಗಂಡನ ಮೃತ ತಂದೆಯ (ಅಂದರೆ ತ ಮೃತ ಮಾವನ) ಆಸ್ತಿಯಲ್ಲಿ ಆತನ ಹೆಂಡತಿ (ಅಂದರೆ ತನ್ನ ಅತ್ತೆ) ಮತ್ತು ಆಕೆಯ ಮಕ್ಕಳೊಂದಿಗೆ ಸಮಪಾಲನ್ನು ಪಡೆಯುತ್ತಾಳೆ.
ಮೃತ ಹಿಂದೂ ಪುರುಷನೊಬ್ಬನ ಮಗ ಅಥವಾ ಮಗಳು ಆತನಿಗಿಂತ ಮೊದಲೇ ಮೃತಪಟ್ಟಿದ್ದಲ್ಲಿ ಆತನ ಇಂತಹ ಮಗನ ಅಥವಾ ಮಗಳ ಹೆಣ್ಣು ಮಕ್ಕಳು ಮೃತನ ಆಸ್ತಿಯಲ್ಲಿ ಪಾಲನ್ನು ತಮ್ಮ ಸಹೋದರರೊಂದಿಗೆ ಪಡೆಯುತ್ತಾರೆ.
ಅಲ್ಲದೆ ಮೃತ ಹಿಂದೂ ಸ್ತ್ರೀಯಳ ಮೊದಲೇ ಮೃತಪಟ್ಟಿದ್ದ ಮಗನ ಇಲ್ಲವೇ ಮಗಳ ಹೆಣ್ಣು ಮಕ್ಕಳು ತಮ್ಮ ಸಹೋದರರೊಂದಿಗೆ ಮೃತಳ ಆಸ್ತಿಯಲ್ಲಿ ಪಾಲು ಪಡೆಯುತ್ತಾರೆ.
ಹಿಂದೂ ವಿಧವೆ ಹೆಂಡತಿ ತನ್ನ ಮೃತ ಪತಿಯ ಆಸ್ತಿಯನ್ನು ಪಡೆದ ನಂತರ ಅದರ ಮೇಲಿನ ತನ್ನ ಹಕ್ಕನ್ನು ಯಾವ ಸಂದರ್ಭದಲ್ಲೂ ಕಳೆದುಕೊಳ್ಳುವುದಿಲ್ಲ.
• ಆಸ್ತಿಯನ್ನು ಹೊಂದಿದ, ಮಕ್ಕಳಿಲ್ಲದ, ವಿಧವೆಯು ಒಬ್ಬ ಮಗ ಅಥವಾ ಮಗಳನ್ನು ದತ್ತಕ ತೆಗೆದುಕೊಂಡರೂ ಅವಳ ಜೀವಮಾನದಲ್ಲಿ ದತ್ತಕ ಮಗನಿಗೆ ಅಥವಾ ಮಗಳಿಗೆ ಆಕೆಯ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ತನ್ನ ಆಸ್ತಿಯ ಬಗ್ಗೆ ಆಕೆ ವ್ಯವಸ್ಥಾ ಪತ್ರ ಮಾಡದೇ ಸತ್ತಾಗ ಮಾತ್ರ ದತ್ತಕ ಮಗ ಅಥವಾ ಮಗಳು ಆಕೆಯ ಆಸ್ತಿಗೆ ವಾರಸುದಾರರಾಗುತ್ತಾರೆ.