ರಾಜ್ಯದ ಎಲ್ಲಾ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸುವಂತೆ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ಆದೇಶಿಸಿದೆ.
ಕಾಲೇಜಿನಲ್ಲಿ ಭಾವಚಿತ್ರ ಅಳವಡಿಸುವ ಕುರಿತಂತೆ ವಿದ್ಯಾರ್ಥಿ ಮತ್ತು ಕಾಲೇಜು ಆಡಳಿತದ ನಡುವೆ ಉದ್ಭವಿಸಿದ್ದ ವಿವಾದ ಇತ್ಯರ್ಥಪಡಿಸಿದ ನ್ಯಾಯಮೂರ್ತಿ ಜಿ.ಆರ್ ಸ್ವಾಮಿನಾಥನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಅಪ್ರತಿಮ ಪಾಂಡಿತ್ಯದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಪ್ರತಿಯೋರ್ವ ಕಾನೂನು ವಿದ್ಯಾರ್ಥಿಗೂ ಸ್ಪೂರ್ತಿಯಾಗಬಲ್ಲರು. ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ರಾಜ್ಯದ ಎಲ್ಲ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.
ಅಲ್ಲದೇ, ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ತೊಂದರೆ ಎದುರಿಸಿದ್ದಕ್ಕಾಗಿ 10 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ. ಈ ಹಣವನ್ನು ಉತ್ತಮ ಕಾನೂನು ಪುಸ್ತಕ ಕೊಳ್ಳಲು ಬಳಸುವಂತೆ ವಿದ್ಯಾರ್ಥಿಗೆ ಸೂಚಿಸಿದೆ.
ಆದೇಶ ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಜಿ.ಆರ್ ಸ್ವಾಮಿನಾಥನ್ ಅವರು, ತಮ್ಮ ಕೊಠಡಿಯಲ್ಲೇ ಡಾ. ಬಿ.ಆರ್ ಅಂಬೇಡ್ಕರರ ಭಾವಚಿತ್ರ ಇಲ್ಲದಿರುವುದನ್ನು ಗಮನಿಸಿ, ಬದಲಾವಣೆ ಮೊದಲು ನಮ್ಮಿಂದಲೇ ಆರಂಭವಾಗಬೇಕು ಎಂದಿದ್ದಾರೆ. ಅದರಂತೆ, ತಮ್ಮ ಕೊಠಡಿಯಲ್ಲಿಯೂ ತಕ್ಷಣವೇ ಅಂಬೇಡ್ಕರರ ಭಾವಚಿತ್ರ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಹಿನ್ನೆಲೆ: ತಮಿಳುನಾಡಿನ ಸರ್ಕಾರಿ ಕಾನೂನು ಕಾಲೇಜಿನ 4ನೇ ಸೆಮಿಸ್ಟರ್ ವಿದ್ಯಾರ್ಥಿ ಎಸ್ ಸಸಿಕುಮಾರ್ ತಮ್ಮ ಪ್ರಾಂಶುಪಾಲರ ಕಚೇರಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರರ ಭಾವಚಿತ್ರ ಇಲ್ಲದಿರುವುದನ್ನು ಕಟುವಾಗಿ ಪ್ರಶ್ನಿಸಿದ್ದ. ಅಲ್ಲದೇ, ತಮಿಳಿನಲ್ಲಿ ಪಾಠ ಹೇಳುವಂತೆ ಒತ್ತಾಯಿಸಿದ್ದ. ವಿದ್ಯಾರ್ಥಿಯ ಒರಟು ವರ್ತನೆ ಹಿನ್ನೆಲೆಯಲ್ಲಿ ಕಾಲೇಜು ಆತನನ್ನು ತರಗತಿಯಿಂದ ಅಮಾನತು ಮಾಡಿತ್ತು. ಈ ಶಿಸ್ತು ಕ್ರಮ ರದ್ದು ಕೋರಿ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವಿದ್ಯಾರ್ಥಿ ತನ್ನ ತಪ್ಪಿಗೆ ಕ್ಷಮೆ ಕೋರಿದ್ದಾನೆ. ಹೀಗಾಗಿ, ಕಾಲೇಜು ಘಟನೆಯನ್ನು ಮರೆತು ವಿದ್ಯಾರ್ಥಿಗೆ ಕಲಿಯಲು ಅವಕಾಶ ನೀಡಬೇಕು ಎಂದಿದೆ. ಅಲ್ಲದೇ ಅಂಬೇಡ್ಕರರು “ವಿದ್ಯಾವಂತರಾಗಿ, ಸಂಘಟಿತರಾಗಿ, ಹೋರಾಟ ಮಾಡಿ” ಎಂದಿದ್ದಾರೆ. ವಿದ್ಯಾರ್ಥಿಯಾಗಿ ನೀನು ಸದ್ಯಕ್ಕೆ ಅಂಬೇಡ್ಕರರ ಮೊದಲನೇ ಸಲಹೆಯನ್ನು ಪಾಲಿಸು ಎಂದು ಸೂಚಿಸಿದೆ.
(W.P.(MD)No.17892 of 2022)