ಬೆಂಗಳೂರು: ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಕೆ ಸುಧೀಂದ್ರರಾವ್ ಅವರನ್ನು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರ ಹುದ್ದೆ 2022ರ ಜುಲೈ 18ರಿಂದ ಖಾಲಿ ಉಳಿದಿತ್ತು. ಪೊಲೀಸರ ವಿರುದ್ಧದ ದೂರುಗಳ ಪರಿಶೀಲನೆ ನಡೆಸುವ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆಗೆ ಅರ್ಹರನ್ನು ನೇಮಕ ಮಾಡುವಂತೆ ಕೋರಿ ವಕೀಲರಾದ ಎಸ್.ಉಮಾಪತಿ ಹಾಗೂ ಸುಧಾ ಕಟ್ವಾ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.
ಪಿಐಎಲ್ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾ. ಸುಧೀಂದ್ರ ರಾವ್ ಅವರನ್ನು ನೇಮಕ ಮಾಡಿದೆ.
ನ್ಯಾಯಮೂರ್ತಿ ನಂಗ್ಲಿ ಕೃಷ್ಣರಾವ್ ಸುಧೀಂದ್ರರಾವ್ ಅವರು ಭ್ರಷ್ಟಾಚಾರ ವಿರೋಧಿ ನ್ಯಾಯಮೂರ್ತಿ ಎಂದೇ ಪ್ರಸಿದ್ಧರು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ವೇಳೆ ಹಲವು ರಾಜಕಾರಣಿಗಳಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದರು. ಅಕ್ರಮ ಡಿನೋಟಿಫಿಕೇಷ್ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಡಿ ಮಾಜಿ ಸಿಎಂ ಸೇರಿದಂತೆ ಹಲವು ರಾಜಕೀಯ ನಾಯಕರನ್ನು ಜೈಲಿಗಟ್ಟಿದ್ದರು. ಇದೀಗ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದು ಮಹತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪೊಲೀಸ್ ದೂರು ಪ್ರಾಧಿಕಾರ: ಪೊಲೀಸ್ ವ್ಯವಸ್ಥೆಯ ಸುಧಾರಣೆ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶಾನುಸಾರ ರಾಜ್ಯ ಸರ್ಕಾರ ಪೊಲೀಸ್ ದೂರುಗಳ ಪ್ರಾಧಿಕಾರ ರಚಿಸಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದೂರು ಪ್ರಾಧಿಕಾರದ ಕಚೇರಿಗಳಿದ್ದು ಅಲ್ಲಿ ಪೊಲೀಸರಿಂದ ತೊಂದರೆಗೊಳಗಾದವರು ದೂರು ಸಲ್ಲಿಸಬಹುದಾಗಿದೆ. ಅದರಂತೆ ಪೊಲೀಸರ ಕರ್ತವ್ಯಲೋಪ, ಅಧಿಕಾರ ದುರುಪಯೋಗ, ಕಿರುಕುಳ, ಸುಳ್ಳು ಕೇಸ್ ದಾಖಲಿಸುವುದು, ವಿರೋಧಿಗಳೊಂದಿಗೆ ಶಾಮೀಲಾಗುವುದು ಸೇರಿದಂತೆ ಪೊಲೀಸ್ ಅಧಿಕಾರಿಗಳ ದುರ್ನಡತೆ ವಿರುದ್ಧ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.