ಬೆಂಗಳೂರು: ಗ್ರಾಮ ಪಂಚಾಯಿತಿ ಸದಸ್ಯರು ಎಸ್ಕಾಂ ಗುತ್ತಿಗೆದಾರರ ಪರವಾನಿಗೆ ಹೊಂದುವುದು ಲಾಭದ ಹುದ್ದೆ ಅಥವಾ ಕಚೇರಿ ಹೊಂದಿರುವುದಕ್ಕೆ ಸಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಇದೇ ಕಾರಣಕ್ಕೆ ಗುತ್ತಿಗೆದಾರರೊಬ್ಬರನ್ನು ಗ್ರಾಮ ಪಂಚಾಯ್ತಿ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ನ ಕಲಬುರಗಿ ಪೀಠ ಎತ್ತಿಹಿಡಿದಿದೆ.
2023ರ ಏಪ್ರಿಲ್ 21 ರಂದು ರಾಯಚೂರಿನ ಸಿವಿಲ್ ಕೋರ್ಟ್ ತಮ್ಮನ್ನು ಗ್ರಾ.ಪಂ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ವಿದ್ಯುತ್ ಗುತ್ತಿಗೆದಾರರೂ ಆಗಿರುವ ಮಾಣಿಕ್ಯಪ್ಪ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಪೀಠ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಸೆಕ್ಷನ್ 12(ಜಿ) ಅಡಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಯಾವುದೇ ಪ್ರಾಧಿಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಅಂತಹ ಗ್ರಾ.ಪಂ ಸದಸ್ಯನು ಅನರ್ಹಗೊಳ್ಳುತ್ತಾನೆ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರ ಮಾಣಿಕ್ಯಪ್ಪ 2020ರ ಡಿಸೆಂಬರ್ 30 ರಂದು ಚಂದ್ರಬಂಡಾ ಗ್ರಾಮ ಪಂಚಾಯ್ತಿಯಿಂದ ಆಯ್ಕೆಯಾಗಿದ್ದರೂ ಅವರು ಕೆಪಿಟಿಸಿಎಲ್/ಜೆಸ್ಕಾಂ ನಲ್ಲಿ ಕ್ಲಾಸ್ ಒನ್ ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ ಆಗಿದ್ದಾರೆ. ಇದು ಸರ್ಕಾರದ ಲಾಭದಾಯಕ ಹುದ್ದೆಯನ್ನು ಹೊಂದಿರುವುದನ್ನು ಸ್ಪಷ್ಟಪಡಿಸುತ್ತದೆ. ಸೀಮೆ ಎಣ್ಣೆ ಡೀಲರ್ ಶಿಪ್ ಕೂಡ ಲಾಭದಾಯಕ ಹುದ್ದೆಯೆಂದು ದೆಹಲಿ ಹೈಕೋರ್ಟ್ ಹೇಳಿದೆ. ಅದರಂತೆ ಮಾಣಿಕ್ಯಪ್ಪ ಅವರನ್ನು ಗ್ರಾ.ಪಂ. ಸದಸ್ಯತ್ವದಿಂದ ಅನರ್ಹಗೊಳಿಸಿರುವ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸೂಕ್ತ ಕಾರಣವಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿದೆ.
ಹಿನ್ನೆಲೆ: ಅರ್ಜಿದಾರರಾದ ಮಾಣಿಕ್ಯಪ್ಪ 2020ರ ಡಿಸೆಂಬರ್ 30 ರಂದು ರಾಯಚೂರಿನ ಚಂದ್ರಬಂಡಾ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವರ ಆಯ್ಕೆ ಪ್ರಶ್ನಿಸಿ ಹಾಗೂ ಅನರ್ಹಗೊಳಿಸಲು ಕೋರಿ ದಸ್ತಗೀರ್ ಎಂಬುವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಮಾಣಿಕ್ಯಪ್ಪ ಅವರು ಜೆಸ್ಕಾಂ/ ಕೆಪಿಟಿಸಿಎಲ್ ನಲ್ಲಿ ವರ್ಗ-1 ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದರಿಂದ ಲಾಭದಾಯಕ ಕಚೇರಿಯನ್ನು ಹೊಂದಿದ್ದಾರೆ ಎಂಬುದನ್ನು ಪರಿಗಣಿಸಿದ ರಾಯಚೂರಿನ ಸಿವಿಲ್ ನ್ಯಾಯಾಲಯ ಏಪ್ರಿಲ್ 21, 2023 ರಂದು ಮಾಣಿಕ್ಯಪ್ಪ ಅವರ ಆಯ್ಕೆಯನ್ನು ಅಸಿಂಧುಗೊಳಿಸಿತ್ತು.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಾಣಿಕ್ಯಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ವೇಳೆ ಜೆಸ್ಕಾಂ/ಕೆಪಿಟಿಸಿಎಲ್ ನೊಂದಿಗೆ ಒಪ್ಪಂದವಿದೆಯೇ ಹೊರತು ಗ್ರಾಮ ಪಂಚಾಯಿತಿಯೊಂದಿಗೆ ಅಲ್ಲ. ಅಲ್ಲದೇ, ನಾಮಪತ್ರ ಸಲ್ಲಿಸಿದ ದಿನದಿಂದ ಈವರೆಗೂ ತಾವು ಯಾವುದೇ ಗುತ್ತಿಗೆ ಪಡೆದಿಲ್ಲ ಮತ್ತು ಕಾರ್ಯ ನಿರ್ವಹಿಸಿಲ್ಲ. ಗುತ್ತಿಗೆ ಪರವಾನಿಗೆ ಹೊಂದಿದ್ದ ಮಾತ್ರಕ್ಕೆ ತನ್ನನ್ನು ಅನರ್ಹಗೊಳಿಸಿರುವುದು ಸರಿಯಲ್ಲ ಎಂದು ವಾದಿಸಿದ್ದರು.
WRIT PETITION NO. 201365 OF 2023 (LB-ELE)