ಬೆಂಗಳೂರು: ನ್ಯಾಯಾಲಯಗಳು ಹೊರಡಿಸುವ ಪ್ರತಿ ಆದೇಶ/ತೀರ್ಪಿನಲ್ಲಿಯೂ ಪ್ಯಾರಾ ಸಂಖ್ಯೆ ನಮೂದಿಸುವಂತೆ ಹೈಕೋರ್ಟ್ ರಾಜ್ಯದ ಎಲ್ಲ ನ್ಯಾಯಾಲಯಗಳು ಹಾಗೂ ನ್ಯಾಯಮಂಡಳಿಗಳಿಗೆ ಸೂಚಿಸಿದೆ.
ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ, ಬಿ.ಎಸ್. ಹರಿ ಕಮಾಂಡೆಂಟ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (Crl.A.No.1890/2014) ಪ್ರಕರಣದಲ್ಲಿ ನ್ಯಾಯಾಲಯಗಳ ಎಲ್ಲ ಆದೇಶ ಮತ್ತು ತೀರ್ಪುಗಳಲ್ಲಿನ ಪ್ಯಾರಾಗ್ರಾಫ್ ಗಳಿಗೆ ಸಂಖ್ಯೆ ನೀಡುವಂತೆ ನ್ಯಾಯಾಲಯಗಳಿಗೆ ನಿರ್ದೇಶಿಸಲಾಗಿದೆ. ಅದೇ ರೀತಿ ಶಕುಂತಲಾ ಶುಕ್ಲಾ ವರ್ಸಸ್ ಉತ್ತರ ಪ್ರದೇಶ ರಾಜ್ಯ ಪ್ರಕರಣದಲ್ಲಿಯೂ ತೀರ್ಪು ಸುಸಂಬದ್ಧವಾಗಿರುವಂತೆ ಕ್ರಮ ಸಂಖ್ಯೆ ನೀಡಬೇಕು ಎಂದು ಹೇಳಲಾಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಇಂಡಿಯಾ ವರ್ಸಸ್ ಅಜಯ್ ಕುಮಾರ್ ಸೂದ್ ಪ್ರಕರಣದಲ್ಲಿ ಪ್ಯಾರಾಗ್ರಾಫ್ ಸಂಖ್ಯೆಗಳನ್ನು ನೀಡುವುದರಿಂದ ದೀರ್ಘವಾದ ಆದೇಶ/ತೀರ್ಪುಗಳನ್ನು ಓದಲು ಮತ್ತು ಅರ್ಥೈಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಆದ್ದರಿಂದ ರಾಜ್ಯದ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ತಮ್ಮ ಎಲ್ಲಾ ಆದೇಶಗಳು ಮತ್ತು ತೀರ್ಪುಗಳಲ್ಲಿ ಅನುಕ್ರಮವಾಗಿ ಪ್ಯಾರಾ ನಂಬರ್ ಗಳನ್ನು ನಮೂದಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಹೈಕೋರ್ಟ್ ಸುತ್ತೋಲೆ:https://karnatakajudiciary.kar.nic.in/Circulars/circular-rj-99-2023-16062023.pdf