News

ಪತ್ನಿಗೆ ವರದಕ್ಷಿಣೆ ಕಿರುಕುಳ-ಕೊಲೆ: ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Share It

ಬೆಂಗಳೂರು: ಮದುವೆಯಾದ 3 ವರ್ಷದಲ್ಲೇ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ವ್ಯಕ್ತಿಗೆ ಬೆಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 85 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ನಗರದ 71ನೇ ಅಧಿಕ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ಜ್ಯೋತಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಬೆಂಗಳೂರಿನ ರಘು ಶಿಕ್ಷೆಗೆ ಗುರಿಯಾದ ಅಪರಾಧಿ. ಈತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಎಚ್.ಆರ್. ಸತ್ಯವತಿ ವಾದ ಮಂಡಿಸಿದ್ದರು.

ಮದುವೆ ವೇಳೆ ವರದಕ್ಷಿಣೆ ಪಡೆದುಕೊಂಡಿದ್ದಕ್ಕೆ ವರದಕ್ಷಿಣೆ ನಿಷೇಧ ಕಾಯ್ಧೆ ಕಲಂ 3 ರ ಅಡಿ 50 ಸಾವಿರ ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ, ಮದುವೆ ನಂತರ ವರದಕ್ಷಿಣೆ ತರುವಂತೆ ಪೀಡಿಸಿದ್ದಕ್ಕೆ ಕಲಂ 4 ಅಡಿ 6 ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಲಾಗಿದೆ.

ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಕ್ಕೆ ಐಪಿಸಿ ಸೆಕ್ಷನ್ 498(ಎ) 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ದಂಡ, ಹತ್ಯೆ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 302 ರ ಅಡಿ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಮೃತಳ ತಾಯಿಗೆ ಆರ್ಥಿಕ ನೆರವು: ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ 85 ಸಾವಿರ ರೂ ದಂಡ ವಿಧಿಸಲಾಗಿದ್ದು, ಇದರಲ್ಲಿ 80 ಸಾವಿರ ರೂ.ಗಳನ್ನು ಮೃತಳ ತಾಯಿಗೆ ನೀಡಬೇಕು. ಅಪರಾಧಿ ದಂಡದ ಮೊತ್ತಗಳನ್ನು ಪಾವತಿಸದಿದ್ದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಇದೇ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೃತಳ ತಾಯಿಗೆ 2 ಲಕ್ಷ ರೂಪಾಯಿಯನ್ನು ಪರಿಹಾರದ ರೂಪದಲ್ಲಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2009ರ ಆಗಸ್ಟ್ 9ರಂದು ರಘು ಹಾಗೂ ಅಂಬಿಕಾ ವಿವಾಹ ನೆರವೇರಿತ್ತು. ಮದುವೆ ಸಮಯದಲ್ಲಿ ನಗದು ಹಾಗೂ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಹಾಗಿದ್ದೂ, ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಪತಿ ಪೀಡಿಸುತ್ತಿದ್ದ ಹಾಗೂ ಇದೇ ಕಾರಣಕ್ಕೆ 2012 ರ ಡಿಸೆಂಬರ್ 8 ರಂದು ಮಗುವಿನೊಂದಿಗೆ ಮಲಗಿದ್ದ ಅಂಬಿಕಾ ಮೇಲೆ ಕುಡುಗೋಲಿನಿಂದ ಹಲ್ಲೆಗೈದು ಹತ್ಯೆ ಮಾಡಿದ್ದಾನೆ ಎಂದು ಪೋಷಕರು ದೂರು ಸಲ್ಲಿಸಿದ್ದರು.

ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಅಂಬಿಕಾರ ಮೃತ ದೇಹದ ಮೇಲೆ 35 ಬಾರಿ ಕುಡುಗೋಲಿನಿಂದ ಹಲ್ಲೆ ಮಾಡಿದ್ದು ಕಂಡು ಬಂದಿತ್ತು. ಘಟನೆ ಸಂಬಂಧ ತನಿಖಾಧಿಕಾರಿ ಬಾಳೇಗೌಡ ತನಿಖೆ ನಡೆಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.


Share It

You cannot copy content of this page