ಬೆಂಗಳೂರು: ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಲು ಆದೇಶ ನೀಡಿ 14 ವರ್ಷ ಕಳೆದರೂ ಸರ್ವೇ ಮಾಡದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ, ಜ.15ರಂದು ಸರ್ವೇ ನಡೆಸಿ ಡಿ.30ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಅರಣ್ಯ ಒತ್ತುವರಿ ವಿಚಾರವಾಗಿ ಶ್ರೀನಿವಾಸಪುರ ಮೂಲದ ಹೈಕೋರ್ಟ್ ವಕೀಲ ಕೆ.ವಿ ಶಿವಾರೆಡ್ಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ನಿಗದಿಪಡಿಸಿದೆ.
ಜನವರಿ 15ರಂದು ನಡೆಯುವ ಸರ್ವೇ ಕಾರ್ಯದ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಥವಾ ಅವರ ಅಧಿಕೃತ ಪ್ರತಿನಿಧಿ ಭಾಗವಹಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ರಮೇಶ್ ಕುಮಾರ್ ಅವರಿಗೆ ನೋಟಿಸ್ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ನೋಟಿಸ್ ನೀಡಿದ ನಂತರವೂ ರಮೇಶ್ ಕುಮಾರ್ ಅಥವಾ ಅವರ ಅಧಿಕೃತ ಪ್ರತಿನಿಧಿ ಭಾಗವಹಿಸದಿದ್ದಲ್ಲಿ ಸರ್ವೇ ಮುಂದುವರಿಸಬೇಕು. ಗೈರಾದಲ್ಲಿ ಸರ್ವೇ ನಡೆಸಿದ ನಂತರ ನೀಡುವ ವರದಿಯನ್ನು ಆಕ್ಷೇಪಿಸಿ ಯಾವುದೇ ಮೇಲ್ಮನವಿ ಸಲ್ಲಿಸುವುದಕ್ಕೆ ಅವರಿಗೆ ಅಧಿಕಾರ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಹೊಸಹುಡ್ಯ ವ್ಯಾಪ್ತಿಯ 61 ಎಕರೆ ಅರಣ್ಯ ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೇ ನಡೆಸುವಂತೆ 2010 ಮತ್ತು 2013ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಆದರೆ, ಒತ್ತುವರಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಸುವುದಕ್ಕೆ ದಿನಾಂಕ ನಿಗದಿಯಾಗಿದ್ದರೂ ಪ್ರಕರಣದ ಪ್ರತಿವಾದಿ ರಮೇಶ್ ಕುಮಾರ್ ಭಾಗವಹಿಸದ ಕಾರಣ ಸರ್ವೇ ನಡೆಸಿಲ್ಲ ಎಂಬ ಅಧಿಕಾರಿಗಳ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.