ಮಂಗಳೂರು: ಸೀ ಬರ್ಡ್ ಬಸ್ ನಲ್ಲಿ ಪ್ರಯಾಣಿಸುವಾಗ ತಿಗಣೆ ಕಚ್ಚಿ ಮಹಿಳೆಯೊಬ್ಬರಿಗೆ ತೊಂದರೆ ಉಂಟಾಗಿದ್ದಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಕೋರ್ಟ್ ಆದೇಶಿಸಿದೆ.
ತಿಗಣೆ ಕಚ್ಚಿದ್ದಕ್ಕೆ ದೂರುದಾರ ಮಹಿಳೆಗೆ ಸಾಕಷ್ಟು ತೊಂದರೆ ಉಂಟಾಗಿದೆ. ಈ ಮಾನಸಿಕ ಕಿರಿಕಿರಿಗೆ ಅವರಿಗೆ 1 ಲಕ್ಷ ಪರಿಹಾರ ನೀಡಬೇಕು. ಇನ್ನು ತಿಗಣೆ ಕಚ್ಚಿದ್ದರಿಂದ ಆರೋಗ್ಯದ ಮೇಲೂ ಅಡ್ಡ ಪರಿಣಾಮ ಉಂಟಾಗಿದೆ. ಅದರ ವೈದ್ಯಕೀಯ ವೆಚ್ಚಕ್ಕಾಗಿ 18,650 ರೂಪಾಯಿ ಪಾವತಿಸಬೇಕು. ಕೋರ್ಚ್ ವೆಚ್ಚಕ್ಕೆ 10 ಸಾವಿರ ನೀಡಬೇಕು. ಬಸ್ ಟಿಕೆಟ್ ವೆಚ್ಚ 840 ರೂಪಾಯಿಯನ್ನು ಹಿಂದಿರುಗಿಸಬೇಕು. ಈ ಎಲ್ಲ ಮೊತ್ತಕ್ಕೆ ವಾರ್ಷಿಕ ಶೇ.6 ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಕೋರ್ಟ್ ಆದೇಶಿಸಿದೆ.
2022ರ ಆಗಸ್ಟ್ ನಲ್ಲಿ ದೀಪಿಕಾ ಎಂಬುವರು ರೆಡ್ ಬಸ್ ಆಪ್ ನಲ್ಲಿ ಟಿಕೆಟ್ ಬುಕ್ ಮಾಡಿ ಮಂಗಳೂರಿನಿಂದ ಬೆಂಗಳೂರಿಗೆ ಸೀಬರ್ಡ್ ಬಸ್ ಮೂಲಕ ಪ್ರಯಾಣಿಸಿದ್ದರು. ಈ ವೇಳೆ ಬಸ್ ನಲ್ಲಿದ್ದ ತಿಗಣೆಗಳು ಪ್ರಯಾಣದ ಉದ್ದಕ್ಕೂ ಕಾಟ ನೀಡಿದ್ದವು. ತಿಗಣೆ ಕಾಟದಿಂದಾಗಿ ತುರಿಕೆ ಉಂಟಾಗಿ ದೀಪಿಕಾ ಆರೋಗ್ಯ ಹಾಳಾಗಿತ್ತು. ಇದಲ್ಲದೇ, ದೀಪಿಕಾ ಅವರು ಟಿವಿ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಪ್ಪಿಹೋಗಿತ್ತು.
ತಮಗಾದ ತೊಂದರೆಗೆ ಪರಿಹಾರ ಕೋರಿ ದೂರುದಾರರು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಆಯೋದ ಅಧ್ಯಕ್ಷರಾದ ಸೋಮಶೇಖರಪ್ಪ ಕೆ ಹಂಡಿಗೋಲ್ ಮತ್ತು ಶಾರದಮ್ಮ ಎಚ್.ಜಿ ಅವರಿದ್ದ ನ್ಯಾಯಪೀಠ ಪರಿಹಾರವನ್ನು ಬಡ್ಡಿ ಸಹಿತ 45 ದಿನಗಳಲ್ಲಿ ಪಾವತಿಸುವಂತೆ ಆದೇಶಿಸಿದೆ.