ಬೆಂಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಾದಕ ವಸ್ತು ಮಾರಾಟ ಆರೋಪದ ಮೇಲೆ ಅಮಾಯಕರನ್ನು ಜೈಲಿಗಟ್ಟಿದ್ದ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ಗುಗ್ರಿ, ಎಎಸ್ಐ ಎಸ್.ಕೆ.ರಾಜು, ಕಾನ್ಸಟೇಬಲ್ ಗಳಾದ ಸತೀಶ್ ಬಗಲಿ, ತಿಮ್ಮಪ್ಪ ಪೂಜಾರ ಅವರನ್ನು ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಆದೇಶ ಹೊರಡಿಸಿದ್ದಾರೆ.
ಕಳೆದ ಆಗಸ್ಟ್ 9ರಂದು ಕದಿರೇನಹಳ್ಳಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ವ್ಯಕ್ತಿಗಳನ್ನು ಬನಶಂಕರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿತರ ದ್ವಿಚಕ್ರ ವಾಹನದಲ್ಲಿದ್ದ ಸುಮಾರು 400 ಗ್ರಾಂ ತೂಕದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಆರೋಪಿತರ ಬಂಧನದಿಂದ ಕಂಗಾಲಾದ ಕುಟುಂಬ ಸದಸ್ಯರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ತಮ್ಮವರು ನಿರಪರಾಧಿಗಳಾಗಿದ್ದು, ಪೊಲೀಸ್ ಬಾತ್ಮೀದಾರ ರಾಜನ್ ಎಂಬಾತನ ಕುತಂತ್ರದಿಂದ ಅವರನ್ನು ಬಂಧಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ತನಿಖೆಗೆ ಸೂಚಿಸಿದ್ದರು.
ತನಿಖೆ ವೇಳೆ ಪೊಲೀಸ್ ಬಾತ್ಮೀದಾರ ರಾಜನ್ ಸುಳ್ಳು ಮಾಹಿತಿ ನೀಡಿದ್ದು ಹಾಗೂ ಪೊಲೀಸರು ಕರ್ತವ್ಯಲೋಪ ಎಸಗಿರುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ತಪ್ಪು ಮಾಡಿದ್ದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ವ್ಯಕ್ತಿಗಳೊಂದಿಗೆ ಪೊಲೀಸ್ ಬಾತ್ಮೀದಾರ ರಾಜನ್ ವೈಯಕ್ತಿಕ ದ್ವೇಷ ಹೊಂದಿದ್ದು, ಸಂಚು ರೂಪಿಸಿ ತನ್ನ ಸ್ನೇಹಿತೆಯ ಮೂಲಕ ಅವರ ದ್ವಿಚಕ್ರ ವಾಹನದಲ್ಲಿ ಮಾದಕ ಪದಾರ್ಥ ಇರಿಸಿದ್ದ. ನಂತರ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ಮಾಡಿಸಿದ್ದ. ಬಾತ್ಮೀದಾರ ರಾಜನ್ ಮಾಹಿತಿಯನ್ನು ಪರಿಶೀಲಿಸದೆ ಪೊಲೀಸರು ಇಬ್ಬರೂ ಅಮಾಯಕರನ್ನು ಬಂಧಿಸಿದ್ದರು.
ಇನ್ನು ಸುಳ್ಳು ಮಾಹಿತಿ ನೀಡಿದ್ದ ರಾಜನ್ ಹಾಗೂ ಆತನಿಗೆ ಸಹಕಾರ ನೀಡಿದ್ದ ಚೈತ್ರಾ ಎಂಬುವರನ್ನು ಬಂಧಿಸಲಾಗಿದೆ. ಜತೆಗೆ ಪ್ರಕರಣದಲ್ಲಿ ಸಿಬ್ಬಂದಿ ಲಾಭ ಪಡೆದಿರುವುದರ ಕುರಿತು ತನಿಖೆ ನಡೆಸಲಾಗುತ್ತಿದೆ.