News

ಜಾಮೀನು ನೀಡುವಾಗ ಆರೋಪಿಗಳ ಆರ್ಥಿಕ-ಸಾಮಾಜಿಕ ಸ್ಥಿತಿ ಪರಿಗಣಿಸಬೇಕು: ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ನಿರ್ದೇಶನ

Share It

ಅಲಹಾಬಾದ್: ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಅದನ್ನು ಪರಿಗಣಿಸಿ ಜಾಮೀನು ನೀಡುವ ವೇಳೆ ಶ್ಯೂರಿಟಿ ನಿಗದಿ ಮಾಡುವ ಮುನ್ನ ಅವರ ಆರ್ಥಿಕ-ಸಾಮಾಜಿಕ ಸ್ಥಿತಿ ಪರಿಗಣಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.

ನ್ಯಾಯಾಲಯದಿಂದ ಜಾಮೀನು ಸಿಕ್ಕರೂ ಶ್ಯೂರಿಟಿ ನೀಡಲಾಗದ ಪರಿಸ್ಥಿತಿಯಿಂದಾಗಿ ಜೈಲಿನಲ್ಲಿಯೇ ಉಳಿದ್ದ ಆರೋಪಿ ಅರ್ಮಾನ್ ಮತ್ತೊಂದು ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಅಜಯ್ ಭಾನೋತ್ ಅವರಿದ್ದ ಪೀಠ ಮೇಲಿನಂತೆ ನಿರ್ದೇಶಿಸಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಅವರಿಗೆ ಜಾಮೀನು ನೀಡುವಂತಿದ್ದರೆ, ಶ್ಯೂರಿಟಿ ವಿಧಿಸುವಾಗ ಎಚ್ಚರಿಕೆಯಿಂದ ಅವರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಅವಲೋಕಿಸಬೇಕು. ಇಲ್ಲದಿದ್ದರೆ ಜಾಮೀನು ನೀಡಿ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟಿದೆ.   

ಅಲ್ಲದೇ, ನ್ಯಾಯಾಲಯಗಳು ಯಾಂತ್ರಿಕವಾಗಿ ಜಾಮೀನು ಷರತ್ತುಗಳನ್ನು ವಿಧಿಸಬಾರದು. ಕಠಿಣ ಷರತ್ತುಗಳನ್ನು ವಿಧಿಸುವುದರಿಂದ ಅರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ಸುಪ್ರೀಂ ಕೋರ್ಟ್ ಅರ್ವಿಂದ್ ಸಿಂಗ್ ವರ್ಸಸ್ ಉತ್ತರ ಪ್ರದೇಶ ಪ್ರಕರಣದಲ್ಲಿ ಇಂತಹ ಸಂದರ್ಭಗಳಲ್ಲಿ ಜಾಮೀನು ಷರತ್ತುಗಳನ್ನು ವಿಧಿಸುವ ಕುರಿತಂತೆ ಮಾರ್ಗಸೂಚಿಗಳನ್ನು ಹಾಕಿಕೊಟ್ಟಿದೆ. ನ್ಯಾಯಾಲಯಗಳು ಸುಪ್ರೀಂ ನಿರ್ದೇಶನಗಳನ್ನು ಪಾಲಿಸುವಲ್ಲಿ ಎಚ್ಚರ ತಪ್ಪಬಾರದು ಎಂದು ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.

ಇನ್ನು ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿ ಆದೇಶಿಸಿರುವ ಹೈಕೋರ್ಟ್, ಆರೋಪಿ ತಪ್ಪಿಸಿಕೊಂಡು ಓಡಿ ಹೋಗುವ ಸಾಧ್ಯತೆಗಳಿಲ್ಲ. ತನಿಖೆಗೆ ಎಲ್ಲ ರೀತಿಯ ಅಗತ್ಯ ಸಹಕಾರ ನೀಡಿದ್ದಾನೆ. ಹೀಗಾಗಿ ಆತನಿಗೆ ಕಠಿಣ ಷರತ್ತುಗಳನ್ನು ವಿಧಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಆರೋಪಿ/ಅರ್ಜಿದಾರ ಸಾಕ್ಷ್ಯ ನಾಶಪಡಿಸಬಾರದು ಅಥವಾ ಸಾಕ್ಷಿಯ ಮೇಲೆ ಪ್ರಭಾವ ಬೀರಬಾರದು ಮತ್ತು ನಿಗದಿತ ದಿನಾಂಕಗಳನ್ನು ನ್ಯಾಯಾಲಯದ ಒಪ್ಪಿಗೆ ಇಲ್ಲದೇ ಗೈರುಹಾಜರಾಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ. ಉಳಿದ ಪ್ರಕರಣಗಳಲ್ಲಿ ಆರೋಪಿ ಪಡೆದುಕೊಂಡಿರುವ ಜಾಮೀನು ಆದೇಶಗಳ ಜಾರಿಗೆ ಅಗತ್ಯ ನೆರವು ನೀಡುವಂತೆ ಜಿಲ್ಲಾ ಕಾನೂನು ಸೇವಾ ಸಮಿತಿಗೆ ನಿರ್ದೇಶಿಸಿದೆ.

(Neutral Citation No.2024:AHC:139954)


Share It

You cannot copy content of this page