ಬೆಂಗಳೂರು: ಕುಂಡಲಿ ಪೂಜೆ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಜ್ಯೋತಿಷಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಮದ್ದೂರಿನ ಅನ್ನಪೂರ್ಣೇಶ್ವರಿ ಮಹಾಕಾಳಿ ಜ್ಯೋತಿಷ್ಯಾಲಯದ ಜ್ಯೋತಿಷಿ ಮೋಹನ್ ದಾಸ್ ಅಲಿಯಾಸ್ ಶಿವರಾಮು ಹಾಗೂ ಮಹಿಳೆಯ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ಜಿ ಉಮಾ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಮಹಿಳೆಯ ಜಾತಕದಲ್ಲಿನ ಕುಂಡಲಿ ದೋಷವನ್ನು ಸರಿಪಡಿಸಲು ಪತಿ ತನ್ನ ಪತ್ನಿಯನ್ನು ಜ್ಯೋತಿಷಿ ಬಳಿಗೆ ಕರೆದೊಯ್ದಿದ್ದಾರೆ. ಈ ವೇಳೆ ಜ್ಯೋತಿಷಿ ಅಸಭ್ಯವಾಗಿ ಮಹಿಳೆಯ ದೇಹವನ್ನು ಸ್ಪರ್ಶಿಸಿರುವ ಆರೋಪವಿದೆ. ಇನ್ನು ಈ ವೇಳೆ ಸ್ಥಳದಲ್ಲಿದ್ದ ಪತಿ ಜ್ಯೋತಿಷಿಯ ನಡವಳಿಕೆಯನ್ನು ವಿರೋಧಿಸದಂತೆ ಪತ್ನಿಗೆ ಎಚ್ಚರಿಕೆ ನೀಡಿರುವ ಆರೋಪವಿದೆ. ಈ ಮೂಲಕ ಇಬ್ಬರೂ ಅರ್ಜಿದಾರರು ಗಂಭೀರ ಸ್ವರೂಪದ ಅಪರಾಧ ಎಸಗಿರುವ ಆರೋಪಕ್ಕೆ ಸಿಲುಕಿದ್ದಾರೆ.
ಎರಡನೇ ಆರೋಪಿಯಾಗಿರುವ ಜ್ಯೋತಿಷಿ ಮಹಿಳೆಯ ಘನತೆಗೆ ಧಕ್ಕೆಯಾಗುವಂತೆ ಆಕೆಯ ದೇಹವನ್ನು ಸ್ಪರ್ಷಿಸಿದ ಆರೋಪವಿದೆ. ಈ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರಲು ಬಲಪ್ರಯೋಗ) ಮತ್ತು 354ಎ (ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿರುವ ಆರೋಪವಿದೆ. ಹೀಗಾಗಿ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ಅರ್ಜಿದಾರ ಪತಿ ಮತ್ತು ಜ್ಯೋತಿಷಿಯ ಮನವಿಯನ್ನು ವಜಾಗೊಳಿಸಿದೆ.
ಆರೋಪವೇನು: 2014ರಲ್ಲಿ ವಿವಾಹವಾಗಿರುವ ದಂಪತಿ ನಡುವೆ ಮನಸ್ಥಾಪವಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಜ್ಯೋತಿಷಿಯನ್ನು ಭೇಟಿಯಾಗುವಂತೆ ಪತಿಯ ಕುಟುಂಬದವರು ಒತ್ತಾಯಿಸಿದ್ದರು. ಅದರಂತೆ ಕುಂಡಲಿ ಪೂಜೆಗಾಗಿ ಮಹಿಳೆಯ ಪತಿ ಜ್ಯೋತಿಷಿ ಬಳಿ ಕರೆದೊಯ್ದಿದ್ದರು. ಈ ವೇಳೆ ಜ್ಯೋತಿಷಿ ಕುಂಡಲಿ ಸರಿಪಡಿಸುವ ನೆಪ ಹೇಳಿ ಮಹಿಳೆಯ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿದರು. ಇದಕ್ಕೆ ಪ್ರತಿರೋಧಿಸದಂತೆ ಪತಿ ತಡೆದರು ಎಂದು ದೂರುದಾರ ಮಹಿಳೆ ಆರೋಪಿಸಿದ್ದರು.
ದೂರಿನ ಮೇರೆಗೆ ಮದ್ದೂರು ಠಾಣೆ ಪೊಲೀಸರು ಜ್ಯೋತಿಷಿ ಹಾಗೂ ಮಹಿಳೆಯ ಪತಿ ವಿರುದ್ಧ ಐಪಿಸಿ ಸೆಕ್ಷನ್ 498A, 354, 354A, 508, 34 ಅಡಿ ಎಫ್ಐಆರ್ ದಾಖಲಿಸಿದ್ದು, ಪ್ರಕರಣ ರದ್ದು ಕೋರಿ ಆರೋಪಿತರು ಹೈಕೋರ್ಟ್ ಮೊರೆಹೋಗಿದ್ದರು.
(CRIMINAL PETITION NO. 2585 OF 2021)