News

ವಕೀಲರ ಸಂಘದ ಮುಖ್ಯಸ್ಥರಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್

Share It

ಬೆಂಗಳೂರು: ವಕೀಲರು ಪ್ರತಿಭಟನೆ/ಮುಷ್ಕರಗಳಲ್ಲಿ ಭಾಗಿಯಾಗುವಂತಿಲ್ಲ ಎಂಬ ನಿಯಮದ ಹೊರತಾಗಿಯೂ ವಕೀಲರು ಮುಷ್ಕರಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವಕೀಲರೊಬ್ಬರು ಮುಷ್ಕರದಲ್ಲಿ ಭಾಗಿಯಾಗಿದ್ದ ವೇಳೆ ಅವರು ಪ್ರತಿನಿಧಿಸಬೇಕಿದ್ದ ಕಕ್ಷೀದಾರರ ವಿರುದ್ಧ ನ್ಯಾಯಾಲಯ ಪ್ರತಿಕೂಲ ಆದೇಶ ಹೊರಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನ್ಯಾ. ಎ.ಎಸ್ ಓಕ ಹಾಗೂ ನ್ಯಾ.ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ವಕೀಲರ ನಡೆಗೆ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ, ಈ ಕುರಿತಂತೆ ವಿವರಣೆ ನೀಡುವಂತೆ ಸೂಚಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬಾರ್ ಅಸೋಸಿಯೇಷನ್ ಮುಖ್ಯಸ್ಥರಿಗೆ ನ್ಯಾಯಾಂಗ ನಿಂದನೆ ಅಡಿ ನೋಟಿಸ್ ಜಾರಿ ಮಾಡಿದೆ.

ವಕೀಲರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಮುಷ್ಕರಗಳಲ್ಲಿ ಭಾಗಿಯಾಗಬಾರದೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ವಕೀಲರು ಮುಷ್ಕರ ನಡೆಸುವುದು ಮತ್ತು ನ್ಯಾಯಾಲಯದ ಕೆಲಸದಿಂದ ದೂರವಿರುವುದು ಸರಿಯಲ್ಲ. ಇಂತಹ ಬೆಳವಣಿಗೆಗಳನ್ನು ನಿಲ್ಲಿಸಬೇಕು. ಅದಕ್ಕಾಗಿ ವಕೀಲರ ಸಂಘದ ಪದಾಧಿಕಾರಿಗಳಿಗೆ ಹಾಜರಾಗಲು ಸೂಚಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ.

ಈ ವಿಚಾರವಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಂದಲೂ ಪ್ರತಿಕ್ರಿಯೆಯನ್ನು ಕೇಳಿರುವ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.

ಹೈಕೋರ್ಟ್ ವಕೀಲರ ಸಂಘ ಮುಷ್ಕರ ಕೈಗೊಂಡಿದ್ದರಿಂದ ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿದ್ದ ವಕೀಲರು ಗೈರು ಹಾಜರಾಗಿದ್ದರು. ಈ ವೇಳೆ ನ್ಯಾಯಾಲಯ ಕಕ್ಷೀದಾರರಿಗೆ ಪ್ರತಿಕೂಲವಾದ ಆದೇಶ ಹೊರಡಿಸಿತ್ತು.


Share It

You cannot copy content of this page