ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಮನೆ ಊಟ ನೀಡದಂತೆ ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರಿಗೆ ಹೈಕೋರ್ಟ್ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ಜೈಲಿನಲ್ಲಿರುವ ನಟ ದರ್ಶನ್ ಗೆ ಮನೆ ಊಟ ಮತ್ತು ಹಾಸಿಗೆ ನೀಡದಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅರ್ಜಿದಾರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ, ದರ್ಶನ್‌ಗೆ ಮನೆ ಊಟ ನೀಡದಂತೆ ವಿರೋಧಿಸಲು ಅರ್ಜಿದಾರರು ಯಾರು? ಎಂದು ಪ್ರಶ್ನಿಸಿದೆ. ಅಲ್ಲದೇ, ಪ್ರಚಾರಕ್ಕಾಗಿ ಇಂತಹ ಅರ್ಜಿ ದಾಖಲಿಸಲಾಗಿದೆಯೇ? ಜೈಲಿನಲ್ಲಿರುವ ಆರೋಪಿಗೆ ಮನೆ ಊಟ ಕೊಡುವುದನ್ನು ವಿರೋಧಿಸಲು ಅರ್ಜಿದಾರರಿಗೆ ಯಾವ ಅಧಿಕಾರವಿದೆ? ಎಂದು ಪ್ರಶ್ನಿಸಿದೆ.
ಅಲ್ಲದೇ, ಒಂದೊಮ್ಮೆ ಸರ್ಕಾರ ಆರೋಪಿಗೆ ಮನೆ ಊಟ ನೀಡಲು ಅನುಮತಿಸಿದರೆ, ಆಗ ಅದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದು. ಆದರೆ, ಸರ್ಕಾರ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಹಂತದಲ್ಲಿ ಅರ್ಜಿ ಸಲ್ಲಿಸಿರುವ ಕ್ರಮ ಸೂಕ್ತವಲ್ಲ. ಜತೆಗೆ ದಂಡ ವಿಧಿಸಿ ಅರ್ಜಿ ವಜಾ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ವೇಳೆ ವಕೀಲರು, ಅರ್ಜಿಯಲ್ಲಿನ ಮನವಿ ಕುರಿತಂತೆ ಪೀಠಕ್ಕೆ ವಿವರವಾಗಿ ತಿಳಿಸಿಕೊಡಲು ಕಾಲಾವಕಾಶ ನೀಡುವಂತೆ ಕೋರಿದ್ದರಿಂದ ಅರ್ಜಿ ವಿಚಾರಣೆಯನ್ನು ಒಂದು ವಾರ ಮುಂದೂಡಲಾಗಿದೆ.