ದೆಹಲಿ: ವಿಚಾರಣಾಧೀನ ಕೈದಿಗಳ ಬಂಧನದ ಗರಿಷ್ಠ ಕಾಲಮಿತಿಯನ್ನು ತಿಳಿಸುವ ಮತ್ತು ಅಂತಹ ಅವಧಿಯ ನಂತರ ಜಾಮೀನು ನೀಡುವ ಕುರಿತಂತೆ ಹೇಳುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 479 ಪೂರ್ವಾನ್ವಯ ಆಗುತ್ತದೆಯೇ ಎಂಬ ಕುರಿತಂತೆ ಸ್ಪಷ್ಟನೆ ನೀಡಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ದೇಶದ ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾ. ಹಿಮಾ ಕೊಹ್ಲಿ ಹಾಗೂ ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠ ಈ ಕುರಿತಂತೆ ಸ್ಪಷ್ಟನೆ ಕೇಳಿದೆ.
ಪ್ರಕರಣದ ವಿಚಾರಣೆ ವೇಳೆ ಅಮೈಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿ, ಸಿಆರ್ಪಿಸಿ ಸೆಕ್ಷನ್ 436(ಎ) ನ್ನು ಸ್ಥಳಾಂತರಿಸಿರುವ ಬಿಎನ್ಎನ್ಎಸ್ ಸೆಕ್ಷನ್ 479 ಪ್ರಕಾರ ವಿಚಾರಣಾಧೀನ ಕೈದಿಗಳು ಯಾವುದೇ ಅಪರಾಧಕ್ಕೆ ನಿಗದಿಪಡಿಸಲಾದ ಶಿಕ್ಷೆ ಪ್ರಮಾಣದ ಅರ್ಧದಷ್ಟು ಕಾಲ ಜೈಲಿನಲ್ಲಿ ಕಳೆದಿದ್ದರೆ ಅವರಿಗೆ ಜಾಮೀನು ಮಂಜೂರು ಮಾಡಬಹುದು ಎಂದಿದೆ.
ಹಾಗೆಯೇ ಬಿಎನ್ಎನ್ಎಸ್ ಸೆಕ್ಷನ್ 479 ನಲ್ಲಿ ಹೊಸ ನಿಯಮ ಸೇರಿಸಲಾಗಿದ್ದು, ಅದರಂತೆ ಮೊದಲ ಬಾರಿಗೆ ಅಪರಾಧ ಎಸಗಿದ ಮತ್ತು ಈ ಹಿಂದೆ ಯಾವುದೇ ಅಪರಾಧದಡಿ ಶಿಕ್ಷೆಗೆ ಗುರಿಯಾಗಿಲ್ಲದ ವ್ಯಕ್ತಿ ಅಪರಾಧಕ್ಕೆ ನಿಗದಿಪಡಿಸಲಾದ ಶಿಕ್ಷೆಯ ಮೂರನೇ ಒಂದು ಸಮಯ ಜೈಲಿನಲ್ಲಿ ಕಳೆದಿದ್ದರೆ ಜಾಮೀನು ನೀಡಬಹುದು ಎಂದಿದೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್, ಬಿಎನ್ಎನ್ಎಸ್ ನ ಸೆಕ್ಷನ್ 479 ಪೂರ್ವಾನ್ವಯವಾಗುತ್ತದೆಯೇ ಎಂದು ಕೇಂದ್ರ ಸರ್ಕಾರಕ್ಕೆ ಕೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿಯಾ ಅವರು, ಕೇಂದ್ರದಿಂದ ಸ್ಪಷ್ಟನೆ ಪಡೆದು ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ.
ಪ್ರಕರಣವನ್ನು ಎರಡು ವಾರ ಕಾಲ ಮುಂದೂಡಿರುವ ಸುಪ್ರೀಂಕೋರ್ಟ್, ಒಂದು ವೇಳೆ ಸೆಕ್ಷನ್ 479 ಪೂರ್ವಾನ್ವಯ ಆಗುವುದಾದರೆ ದೇಶದ ಜೈಲುಗಳ ಮೇಲಿನ ಭಾರ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟಿದೆ.
(W.P.(C) No. 406/2013)