ವಿಜಯಪುರ: ನಗರದಲ್ಲಿ ವಕೀಲರೊಬ್ಬರನ್ನು ಹಾಡುಹಗಲಲ್ಲೇ ಇನ್ನೋವಾ ಕಾರಿನಲ್ಲಿ ಗುದ್ದಿ ಸುಮಾರು ಎರಡೂವರೆ ಕಿ.ಮೀ.ದೂರದವರೆಗೆ ಎಳೆದೊಯ್ದ ಪರಿಣಾಮ ಸಾವನ್ನಪ್ಪಿದ್ದಾರೆ, ಇದನ್ನು ಕೊಲೆ ಎಂದು ಶಂಕಿಸಲಾಗಿದೆ.
ನಗರದ ಬಸವನಗರದಲ್ಲಿ ಇನ್ನೋವಾ ಕಾರೊಂದು ವಕೀಲ ರವಿ ಮೇಲಿನಮನಿ (37) ಎಂಬುವವರನ್ನು ಗುದ್ದಿದೆ. ಅನಂತರ ಬೈಕ್ ಅನ್ನು ಬಸವನಗರದಿಂದ ಸುಮಾರು ಎರಡೂವರೆ ಕಿ.ಮೀ. ದೂರ ಜಿಲ್ಲಾ ಪಂಚಾಯತ ಗೇಟ್ ವರೆಗೆ ಎಳೆದೊಯ್ದಿದೆ.
ಜಿಪಂ ಗೇಟ್ ಬಳಿ ಬೈಕ್ ಮತ್ತು ರವಿಯನ್ನು ಬಿಟ್ಟು ಇನೋವಾ ಚಾಲಕ ವಾಹನದ ಜತೆ ಪರಾರಿಯಾಗಿದ್ದಾನೆ. ಮೃತಪಟ್ಟ ರವಿ ಭೀಮಾ ತೀರದ ಹಂತಕ ಕುಖ್ಯಾತಿಯ ಭಾಗಪ್ಪನ ಸಂಬಂಧಿಕ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೊಣ್ಣೆವರ, ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದೊಂದು ಅಪಘಾತ ಎಂಬಂತೆ ಮೇಲ್ನೋಟಕ್ಕೆ ಕಂಡುಬಂದರೂ, ಎರಡೂವರೆ ಕಿ.ಮೀ. ಎಳೆದೊಯ್ದಿರುವುದು ಮತ್ತು ಅನಂತರ ಪರಾರಿಯಾಗಿರುವುದು ಇದೊಂದು ವ್ಯವಸ್ಥಿತ ಕೊಲೆ ಎಂದು ಕಂಡುಬರುತ್ತಿದೆ. ಮಾಹಿತಿ ಕಲೆ ಹಾಕುತ್ತಿದ್ದು, ಶೀಘ್ರದಲ್ಲೇ ವಾಹನ ಚಾಲಕನನ್ನು ಬಂಧಿಸುತ್ತೇವೆಂದು ಪೊಲೀಸರು ತಿಳಿಸಿದ್ದಾರೆ ಎಂದು ವೈಟ್ ಪೇಪರ್ ವರದಿ ಮಾಡಿದೆ.