News

ಭೂತ ದಾಖಲಿಸಿದ್ದ ಕೇಸ್ ರದ್ದುಪಡಿಸಿದ ಹೈಕೋರ್ಟ್: ತನಿಖಾಧಿಕಾರಿ ವಿರುದ್ಧವೇ ತನಿಖೆಗೆ ಆದೇಶ

Share It

ಅಲಹಾಬಾದ್: ಮೃತ ವ್ಯಕ್ತಿ ದೂರಿನ ಮೇರೆಗೆ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಹಾಗೂ ದೋಷಾರೋಪ ಪಟ್ಟಿಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದೆ. ಇದೇ ವೇಳೆ ಈ ಪ್ರಕರಣದಲ್ಲಿ ತನಿಖೆ ನಡೆಸಿದ ತನಿಖಾಧಿಕಾರಿ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಎಸ್ಪಿಗೆ ಆದೇಶಿಸಿದೆ.

ಮೃತ ವ್ಯಕ್ತಿ ಹೆಸರಿನಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಪುರುಷೋತ್ತಮ್ ಸಿಂಗ್ ಹಾಗೂ ಇತರೆ ನಾಲ್ವರು ಸಿಆರ್ಪಿಸಿ ಸೆಕ್ಷನ್ 482 ರ ಅಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶೆರಿ ಅವರಿದ್ದ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಮೃತ ವ್ಯಕ್ತಿಯೊಬ್ಬ ಎಫ್‌ಐಆರ್ ದಾಖಲಿಸಿದ್ದಾನೆ. ಅಷ್ಟೇ ಅಲ್ಲ, ತನಿಖಾಧಿಕಾರಿ ಮುಂದೆ ಹೇಳಿಕೆ ಕೂಡ ದಾಖಲಿಸಿದ್ದಾನೆ. ಇಷ್ಟೂ ಸಾಲದು ಎಂಬಂತೆ ಪ್ರಕರಣದಲ್ಲಿ ಆತನ ಪರವಾಗಿ ವಕಾಲತ್ ನಾಮ (ಕಕ್ಷೀದಾರನನ್ನು ಪ್ರತಿನಿಧಿಸಲು ವಕೀಲರಿಗೆ ಅಧಿಕಾರ ನೀಡುವ ಕಾನೂನು ದಾಖಲೆ) ಕೂಡ ಸಲ್ಲಿಸಲಾಗಿದೆ. ಇವೆಲ್ಲವೂ ಬಹಳ ವಿಚಿತ್ರವಾಗಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ನೋಡಿದರೆ ಭೂತವೇ ಪ್ರಕರಣವನ್ನು ಕೈಗೆತ್ತಿಕೊಂಡಿರುವಂತೆ ಕಾಣುತ್ತದೆ.”

“ದೂರುದಾರನಾದ ಶಬ್ದ್ ಪ್ರಕಾಶ್ 2011ರ ಡಿಸೆಂಬರ್ 19ರಂದು ಸಾವನ್ನಪ್ಪಿದ್ದಾರೆ ಎಂದು ಡೆತ್ ಸರ್ಟಿಫಿಕೇಟ್ ಹೇಳುತ್ತದೆ. ಆ ನಂತರ 3 ವರ್ಷಗಳ ಬಳಿಕ ಮೃತ ವ್ಯಕ್ತಿ (ಪ್ರೇತ) ಎಫ್‌ಐಆರ್ ದಾಖಲಿಸಿದ್ದಾರೆ. ಜತೆಗೆ ತನಿಖಾಧಿಕಾರಿ ಮುಂದೆ ಹೇಳಿಕೆ ದಾಖಲಿಸಿದ್ದಾರೆ. 2014ರ ನವೆಂಬರ್ 23 ರಂದು ತನಿಖಾಧಿಕಾರಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ಮೃತ ವ್ಯಕ್ತಿಯನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಹೆಸರಿಸಿದ್ದಾರೆ.”

“ಮೃತ ವ್ಯಕ್ತಿಯ ಹೇಳಿಕೆಯನ್ನು ಪೊಲೀಸರು ಅದೇಗೆ ದಾಖಲಿಸಿಕೊಂಡರು ಎಂಬ ವಿಚಾರ ನ್ಯಾಯಾಲಯವನ್ನು ಮೂಕವಿಸ್ಮಿತಗೊಳಿಸಿದೆ. ಹೀಗಾಗಿ ಕುಶಿನಗರದ ಪೊಲೀಸ್ ವರಿಷ್ಠಾಧಿಕಾರಿ ‘ಭೂತ ಎಫ್ಐಆರ್ ದಾಖಲಿಸಿ ಮುಗ್ದ ಜನರಿಗೆ ತೊಂದರೆ ನೀಡುತ್ತಿದೆ’ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಈ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ (ಐಒ) ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸಬೇಕು” ಎಂದು ಹೈಕೋರ್ಟ್ ಆದೇಶಿಸಿದೆ.

ಅಲ್ಲದೇ, “ಮೃತ ವ್ಯಕ್ತಿಯ ಪರವಾಗಿ ಆತನ ಪತ್ನಿ ಮಮತಾದೇವಿ ವಕಾಲತ್ ನಾಮಕ್ಕೆ ಸಹಿ ಮಾಡಿದ್ದು, ಪತಿ ದೂರು ದಾಖಲಿಸುವ ಮುನ್ನ ಮೃತಪಟ್ಟ ವಿಚಾರ ಮುಚ್ಚಿಟ್ಟಿದ್ದಾರೆ. ಹಾಗಿದ್ದೂ, ಮೃತ ವ್ಯಕ್ತಿ ಪರ ವಕಾಲತ್ತು ಸಲ್ಲಿಸಿರುವ ವಕೀಲರಾದ ವಿಮಲ್ ಕುಮಾರ್ ಪಾಂಡೆ ಅವರಿಗೆ ಮುಂದಿನ ದಿನಗಳಲ್ಲಿ ಹೀಗೆ ನಡೆದುಕೊಳ್ಳದಂತೆ ಎಚ್ಚರಕೆ ನೀಡಲು ತೀರ್ಪಿನ ಪ್ರತಿಯನ್ನು ಅಲಹಾಬಾದ್ ವಕೀಲರ ಸಂಘದ ಅಧ್ಯಕ್ಷರಿಗೆ ಕಳುಹಿಸಬೇಕು” ಎಂದು ಹೈಕೋರ್ಟ್ ಸೂಚಿಸಿ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ.

Neutral Citation No. 2024:AHC:126922 (APPLICATION U/S 482 No. – 8258 of 2020)


Share It

You cannot copy content of this page