News

Rapido-Uber: ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಸುಪ್ರೀಂ ತಡೆ

Share It

ನವದೆಹಲಿ: ಬೈಕ್ ಟ್ಯಾಕ್ಸಿಗಳ ಕಾರ್ಯ ನಿರ್ವಹಣೆಗೆ ಅನುಮತಿ ನೀಡಿದ್ದ ದೆಹಲಿ ಹೈಕೋರ್ಟ್ ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಬೈಕ್ ಟ್ಯಾಕ್ಸಿಗಳ ಕಾರ್ಯ ನಿರ್ವಹಣೆಗೆ ಅನುಮತಿಸಿದ್ದ ಹೈಕೋರ್ಟ್ ಆದೇಶ ರದ್ದು ಕೋರಿ ದೆಹಲಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅನಿರುದ್ಧ್ ಬೋಸ್ ಹಾಗೂ ನ್ಯಾ. ರಾಜೇಶ್ ಬಿಂದಾಲ್ ಅವರಿದ್ದ ಪೀಠ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.

ಇದೇ ವೇಳೆ ದೆಹಲಿ ಸರ್ಕಾರ ಬೈಕ್ ಟ್ಯಾಕ್ಸಿ ಸಂಚಾರ ರದ್ದುಪಡಿಸಿದ್ದ ಆದೇಶ ಪ್ರಶ್ನಿಸಿ ಬೈಕ್-ಟ್ಯಾಕ್ಸಿ ಅಗ್ರಿಗೇಟರ್‌ ಗಳಾದ Rapido ಮತ್ತು Uber ಸಲ್ಲಿಸಿರುವ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ಗೆ ಸೂಚಿಸಿದೆ.

ಬೈಕ್ ಟ್ಯಾಕ್ಸಿಗಳ ಕಾರ್ಯ ನಿರ್ವಹಣೆಗೆ ದೆಹಲಿ ಸರ್ಕಾರ ನಿಷೇಧ ಹೇರಿದ್ದು, ಈ ಸಂಬಂಧ ನೀತಿ ರೂಪಿಸುವವರೆಗೆ ಕಾರ್ಯನಿರ್ವಹಿಸಬಾರದು ಎಂದಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಬೈಕ್-ಟ್ಯಾಕ್ಸಿ ಅಗ್ರಿಗೇಟರ್‌ಗಳು ಅರ್ಜಿ ಸಲ್ಲಿಸಿದ್ದರು.

ರಾಪಿಡೊ ಹಾಗೂ ಉಬರ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, 2023ರ ಮೇ 26 ರಂದು ಬೈಕ್ ಟ್ಯಾಕ್ಸಿಗಳ ಕಾರ್ಯ ನಿರ್ವಹಣೆಗೆ ಅನುಮತಿ ನೀಡಿ ಆದೇಶಿಸಿತ್ತು. ಅಲ್ಲದೆ, ಸರ್ಕಾರ ಈ ಸಂಬಂಧ ಅಂತಿಮ ನೀತಿಯನ್ನು ಪ್ರಕಟಿಸುವವರೆಗೆ ಬೈಕ್-ಟ್ಯಾಕ್ಸಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಸರ್ಕಾರಕ್ಕೆ ಸೂಚಿಸಿತ್ತು.


Share It

You cannot copy content of this page