-ಮಲ್ಲಿಕಾರ್ಜುನ್ ಟಿ. ಮೊ:9845051233
ಸಾಲ ಮಾಡಿ ವಾಹನಗಳನ್ನು ಖರೀದಿಸಿದ ಮಾಲಿಕರು ಸುಸ್ತಿದಾರರಾಗಿದ್ದ ವೇಳೆ ಸಾಲ ವಸೂಲಾತಿ ಏಜೆಂಟ್‌ಗಳು ಗೂಂಡಾಗಳ ಮೂಲಕ ಬಲವಂತವಾಗಿ ವಾಹನಗಳನ್ನು ಜಪ್ತಿ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಬಲವಂತವಾಗಿ ಸುಸ್ತಿದಾರರ ವಾಹನಗಳನ್ನು ಕಿತ್ತುಕೊಳ್ಳುವುದು ಸಂವಿಧಾನದ ವಿಧಿ 21 ಖಾತರಿಪಡಿಸಿರುವ ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಒಂದು ವೇಳೆ ಬಲವಂತವಾಗಿ ವಾಹನಗಳನ್ನು ಕಿತ್ತುಕೊಂಡಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬಹುದಾಗಿದೆ ಎಂದು ಪಾಟ್ನಾ ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಅಕ್ರಮವಾಗಿ ವಾಹನಗಳನ್ನು ಜಪ್ತಿ ಮಾಡುತ್ತಿರುವ ಹಣಕಾಸು ಸಂಸ್ಥೆಗಳ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ರಾಜೀವ್ ರಂಜನ್ ಪ್ರಸಾದ್ ಅವರಿದ್ದ ಪೀಠ, ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್ ಗಳು ವಾಹನಗಳ ಸಾಲ ವಸೂಲಾತಿಯನ್ನು ಆರ್.ಬಿ.ಐ ಮಾರ್ಗಸೂಚಿ ಮತ್ತು ಇತರೆ ಕಾನೂನಿನ ಅನುಸಾರ ಮಾಡಬೇಕೇ ವಿನಃ ಬಲವಂತದ ಕ್ರಮವಾಗಿರಬಾರದು. ವಸೂಲಿ ಕ್ರಮ ಕೈಗೊಳ್ಳುವಾಗ ಸಂವಿಧಾನ ಖಾತರಿಪಡಿಸಿರುವ ಜೀವನೋಪಾಯದ ಹಕ್ಕಿನ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ.
ಇದೇ ವೇಳೆ ಕಿರುಕುಳು ನೀಡಿ ವಾಹನನ ಕಿತ್ತುಕೊಂಡ ಪ್ರಕರಣಗಳಲ್ಲಿ ಪ್ರತಿವಾದಿಗಳಾಗಿರುವ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಹೈಕೋರ್ಟ್ ತಲಾ 50 ಸಾವಿರ ದಂಡ ವಿಧಿಸಿದೆ. ಅಲ್ಲದೇ, ಸಾಲವನ್ನು ಬಲವಂತವಾಗಿ ಗೂಂಡಾಗಳ ಮೂಲಕ ವಸೂಲಿ ಮಾಡುವ ಕ್ರಮ ಕೈಬಿಟ್ಟು ಕಾನೂನು ಪ್ರಕಾರ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಆದೇಶಿಸಿದೆ. ಅಂತಿಮವಾಗಿ ಬಲವಂತವಾಗಿ ವಾಹನ ಜಪ್ತಿ ಮಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಬಲವಂತದ ಜಪ್ತಿ ತಡೆಗಟ್ಟಲು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
(Civil Writ Jurisdiction Case No 3456/2021)